ಮಾ.3 ರಿಂದ ಕಾಂಗ್ರೆಸ್ ಪ್ರಚಾರಾಂದೋಲನ : 100 ಕ್ಷೇತ್ರಗಳಲ್ಲಿ ಸಿದ್ದು-ಡಿಕೆ ಪಾದಯಾತ್ರೆ
ಬೆಂಗಳೂರು : ಮತ್ತೆ ಸ್ವತಂತ್ರ್ಯವಾಗಿ ಅಧಿಕಾರ ಹಿಡಿಯಲು ರಾಜ್ಯ ಕಾಂಗ್ರೆಸ್ ನಾಯಕರು ರಣ ತಂತ್ರಗಳನ್ನ ರೂಪಿಸುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಿದ್ಧತೆಗಳನ್ನ ಆರಂಭಿಸಿದ್ದಾರೆ. ಶತಯಾಗತಾಯ ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್ ಮಾರ್ಚ್ ಮೂರರಿಂದ ಪ್ರಚಾರಾಂದೋಲನ ಕಾರ್ಯಕ್ರಮ ಆರಂಭಿಸಲಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿರುವ 100 ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ಪ್ರಚಾರಾಂದೋಲನ ಪ್ರವಾಸಕ್ಕೆ ಮಾ.3 ರಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ನಡೆಸಲಿದ್ದಾರೆ.
ಮಾರ್ಚ್ 1 ರಂದು ದರ್ಗಾ ಮತ್ತು ದೇವಾಲಯಗಳಿಗೆ ಭೇಟಿ ನೀಡಿ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ಮೊದಲ ಹಂತದಲ್ಲಿ ಕಾಂಗ್ರೆಸ್ ನಾಯಕರು ಮಾರ್ಚ್ ನಾಲ್ಕರಂದು ಚಿಕ್ಕಬಳ್ಳಾಪುರದಲ್ಲಿ ಮಾ.5 ರಂದು ದೇವನಹಳ್ಳಿ, ಮಾ.6ರಂದು ನಾಗಮಂಗಲದಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.
ಇನ್ನು ಈ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ತಲೆದೂರದಂತೆ ನೋಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಘಟಕದ ಐದು ಕಾರ್ಯಾಧ್ಯಕ್ಷರಿಗೆ ಜಿಲ್ಲೆಗಳು ಮತ್ತು ಸಹಾಯಕ ಘಟಕಗಳ ಉಸ್ತುವಾರಿ ನೀಡಲಾಗಿದೆ.
ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಕೇಂದ್ರ ರಾಜ್ಯ ಮಹಿಳಾ ಘಟಕ, ಆಸ್ತಿ ಮತ್ತು ಸ್ವತ್ತುಗಳ ಸಮಿತಿ ಹೊಣೆ ನೀಡಲಾಗಿದೆ.
ಸಲೀಂ ಅಹಮದ್ ಅವರಿಗೆ ಗದಗ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು, ಸೇವಾ ದಳ ಮತ್ತು ಪಕ್ಷದ ಸಂಘಟನೆ ಮತ್ತು ಆಡಳಿತದ ಜವಾಬ್ದಾರಿಯನ್ನು ನೀಡಲಾಗಿದೆ.
ಈಶ್ವರ್ ಖಂಡ್ರೆ ಅವರಿಗೆ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಲ್ಲಾರಿ ಜಿಲ್ಲೆಗಳು, ಮತ್ತು ಕಿಸಾನ್ ಕಾಂಗ್ರೆಸ್ ಜವಾಬ್ದಾರಿಗಳನ್ನ ನೀಡಿದ್ದರೇ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ-ಹುಬ್ಬಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರು ವಹಿಸಿಕೊಂಡಿದ್ದಾರೆ.
ಇನ್ನ ಎನ್ಎಸ್ಯುಐ ಜೊತೆಗೆ ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ ಉಸ್ತುವಾರಿಯನ್ನು ಧ್ರುವನಾರಾಯಣ ವಹಿಸಲಾಗಿದೆ.
