ನವದೆಹಲಿ: ಲೋಕಸಭಾ ಚುನಾವಣೆಯ ಕಾವು ರಂಗೇರಿದ್ದು, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ದೆಹಲಿಯ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಚಿದಂಬರಂ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಗೆದ್ದರೆ ಜಾತಿ ಗಣತಿ ನಡೆಸುವ ಭರವಸೆ ನೀಡಿದೆ. ನಿರುದ್ಯೋಗವನ್ನು ಕೇಂದ್ರೀಕರಿಸಿ, ಸಾಮಾಜಿಕ ಆರ್ಥಿಕ ಜಾತಿ ಗಣತಿ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಪ್ರಣಾಳಿಕೆಯ ಮುಖಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಚಿತ್ರವಿದೆ. ʼನ್ಯಾಯ ಪತ್ರʼ ಎಂದು ಹೆಸರು ಇಡಲಾಗಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಫೋಟೋ ಹಾಕಲಾಗಿದೆ.
– ದೇಶಾದ್ಯಂತ ಜಾತಿ ಗಣತಿ, ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯಿತಿ ದರ ಜಾರಿ, ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಅಥವಾ ಆಸ್ಪತ್ರೆ, ಆಶಾ,ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ಕೇಂದ್ರದ ಪಾಲು ಹೆಚ್ಚಳ, 25 ಸಾವಿರಕ್ಕಿಂತ ಜನಸಂಖ್ಯೆ ಜಾಸ್ತಿ ಇರುವ ಹಳ್ಳಿಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆ ನೇಮಕ, 12ನೇ ತರಗತಿ ವರೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬದಲಾವಣೆ, ಪಬ್ಲಿಕ್ ಶಾಲೆಗಳಲ್ಲಿ ಸ್ಪೆಷಲ್ ಫೀಸ್ ರದ್ದು, ಶಿಕ್ಷಕರನ್ನು ಶಿಕ್ಷಣೇತರ ಚಟುವಟಿಕೆಗಳಿಗೆ ಬಳಸಲ್ಲ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಸಂಖ್ಯೆ ರಾಜ್ಯಗಳ ಜೊತೆ ಚರ್ಚಿಸಿ ಹೆಚ್ಚಳ ಮಾಡುವುದು. ಪ್ರತಿ ತಾಲೂಕಿನಲ್ಲಿ ಸರ್ಕಾರಿ ಕಮ್ಯುನಿಟಿ ಕಾಲೇಜು ಆರಂಭ, 9 ರಿಂದ 12ನೇ ತರಗತಿಯ ಮಕ್ಕಳಿಗೆ ಮೊಬೈಲ್ ಫೋನ್ (ಶಾಲೆ, ಕಾಲೇಜು ಕ್ಯಾಂಪಸ್ನಲ್ಲಿ ಉಚಿತ ಅನ್ ಲಿಮಿಟೆಡ್ ಇಂಟರ್ನೆಟ್), 21 ವರ್ಷದೊಳಗಿನ ಕ್ರೀಡಾ ಪ್ರತಿಭೆಗಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಕ್ರೀಡಾ ಸ್ಕಾಲರ್ ಶಿಪ್ ನೀಡುವುದು ಪ್ರಣಾಳಿಕೆಯ ಭಾಗವಾಗಿವೆ.