ಜೈಪುರ : ಕಾಂಗ್ರೆಸ್ ದೇಶದಲ್ಲಿ ಉಗ್ರರಿಗೆ ಮುಕ್ತ ಅವಕಾಶ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ರಾಜಸ್ಥಾನದಲ್ಲಿ ಬಿಜೆಪಿ ರ್ಯಾಲಿ ಉದ್ಧೇಶಿಸಿ ಮಾತನಾಡಿದ ಅವರು, ಭಯೋತ್ಪಾದಕ ಕೃತ್ಯ ನಡೆಸಲು ಕಾಂಗ್ರೆಸ್ ಮುಕ್ತ ಅವಕಾಶ ನೀಡಿದೆ. ಅಪರಾಧಿಗಳಿಗೆ ಕಾನೂನಿನ ಮೇಲೆ ಭಯ ಹೇಗೆ ಬರುತ್ತದೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ (Udaipur Tailor Killing) ಪ್ರಕರಣ ಖಂಡಿಸಿದ ಅವರು, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಉದಯಪುರದಲ್ಲಿ ಅಂತಹ ಘಟನೆಯನ್ನು ಯಾರೂ ಊಹಿಸಿರಲಿಲ್ಲ. ಬಟ್ಟೆ ಹೊಲಿಸುವ ನೆಪದಲ್ಲಿ ಬಂದು ಟೈಲರ್ ಕತ್ತು ಕತ್ತರಿಸುತ್ತಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಏನು ಕ್ರಮ ಕೈಗೊಂಡಿತು? ಈ ಘಟನೆಯನ್ನೇ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡು ರಕ್ತದ ಮೇಲೆ ರಾಜಕಾರಣ ಮಾಡಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ (Congress Government) ಭಯೋತ್ಪಾದಕರ ಬಗ್ಗೆ ಪ್ರೀತಿಯಿಂದ ವರ್ತಿಸುತ್ತಿದೆ. ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಇನ್ನಷ್ಟು ಕೃತ್ಯಗಳನ್ನ ಎಸಗಲು ಮುಕ್ತ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.