ಪಹಲ್ಗಾಮ್ ದಾಳಿಯ ಕುರಿತಂತೆ ಕೆಲ ಕಾಂಗ್ರೆಸ್ ನಾಯಕರ ವಿವಾದಾತ್ಮಕ ಹೇಳಿಕೆಗಳು ಬೆಳಕಿಗೆ ಬಂದಿದ್ದು, ಇದನ್ನು ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದು, ಪಹಲ್ಗಾಮ್ ದಾಳಿಯ ಕುರಿತು ಕೆಲ ನಾಯಕರು ನೀಡಿರುವ ಹೇಳಿಕೆಗಳು ಸಂಪೂರ್ಣವಾಗಿ ಅವರ ವೈಯಕ್ತಿಕ ಅಭಿಪ್ರಾಯ. ಅಂತಹ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೈರಾಮ್ ರಮೇಶ್ ಮುಂದುವರಿದು, ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾಡಿದ ಹೇಳಿಕೆಗಳನ್ನು ಕಾಂಗ್ರೆಸ್ ಯಾವುದೇ ರೀತಿಯಲ್ಲಿಯೂ ಅನುಮೋದಿಸುವುದಿಲ್ಲ. ಪಕ್ಷದ ಅಧಿಕೃತ ನಿಲುವು ಸ್ಪಷ್ಟವಾಗಿದೆ — ಭಯೋತ್ಪಾದಕ ದಾಳಿಗಳನ್ನು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಭದ್ರತೆ ಮುಖ್ಯ ಎಂದು ಹೇಳಿದ್ದಾರೆ.
ಇದೇ ವೇಳೆ, ಪಹಲ್ಗಾಮ್ ದಾಳಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಕೆಲವು ಹೇಳಿಕೆಗಳು ಕೂಡ ರಾಜಕೀಯ ಸಂಚಲನವನ್ನುಂಟು ಮಾಡಿದ್ದು, ಇದರ ಬಗ್ಗೆ ಪಕ್ಷದ ಒಳಗೆಯೂ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿ ಲಭ್ಯವಾಗಿದೆ.








