ಬೆಂಗಳೂರು : ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಧ್ವಜವೇ ನಮ್ಮ ಧರ್ಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಜುಲೈ 2 ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಜ್ಞಾ ದಿನ ಕಾರ್ಯಕ್ರಮ ಪೂರ್ವ ತಯಾರಿ ಕುರಿತ ಸಮಾಲೋಚನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಕಾರ್ಯಕ್ರಮ ನನ್ನನ್ನಾಗಲಿ, ಕಾರ್ಯಾಧ್ಯಕ್ಷರನ್ನಾಗಲಿ ಅಥವಾ ಇತರೆ ನಾಯಕರನ್ನು ಬಿಂಬಿಸಿಕೊಳ್ಳಲು ಮಾಡುತ್ತಿಲ್ಲ. ಈ ಕಾರ್ಯಕ್ರಮವನ್ನು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಕಾರ್ಯಕರ್ತರ ಧ್ವನಿಯಾಗಲು ನಡೆಸಲಾಗುತ್ತಿದೆ. ಕಾರ್ಯಕರ್ತರು ಶಕ್ತಿಶಾಲಿಯಾದರೆ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂಬುದು ನನ್ನ ನಂಬಿಕೆ. ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ನನಗೆ ಇದು ಅಧಿಕಾರವಲ್ಲ, ಜವಾಬ್ದಾರಿ. ಪಕ್ಷದ ಕಾರ್ಯಕರ್ತನಾಗಿ ನಾನು ನಿಮ್ಮೆಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲು ಬಯಸುತ್ತೇನೆ ಎಂದರು.
ನನ್ನನ್ನು ಜೈಲಿಗೆ ಕಳುಹಿಸಿದಾಗ ಡಿ.ಕೆ ಶಿವಕುಮಾರ್ ರಾಜಕೀಯ ಅಂತ್ಯವಾಯ್ತು ಅಂತಾ ಮಾತನಾಡಿದರು. ನಮ್ಮ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರು ಜೈಲಿಗೆ ಬಂದು ನನ್ನ ಜತೆ ಒಂದು ಗಂಟೆ ಮಾತುಕತೆ ನಡೆಸಿ ನನಗೆ ಶಕ್ತಿ ತುಂಬಿದರು. ಈಗ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಎಷ್ಟು ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ನಾವು ಈ ಸಂದರ್ಭದಲ್ಲಿ ಯೋಚಿಸಬೇಕು.
ಎನ್ ಎಸ್ ಯುಐ ಹೆಣ್ಣುಮಗಳು ಇಂದು ಅಧ್ಯಕ್ಷೆಯಾಗಿದ್ದಾಳೆ. ಒಂದು ಕಾಲದಲ್ಲಿ ಮಹಿಳಾ ಕಾಂಗ್ರೆಸ್ ನವರಿಗೆ ವೇದಿಕೆ ಮೇಲೆ ಜಾಗ ಸಿಗುತ್ತಿರಲಿಲ್ಲ. ಎನ್ ಎಸ್ ಯುಐ, ಯೂತ್ ಕಾಂಗ್ರೆಸ್ ಅನ್ನು ಕೇವಲ ಹೋರಾಟ ಮಾಡಲು ಬಳಸಿಕೊಳ್ಳುತ್ತಿದ್ದರು. ಇದನ್ನು ನೋಡಿದ್ದೇನೆ, ಅನುಭವಿಸಿದ್ದೇನೆ. ಇವರು ಇಲ್ಲದಿದ್ದರೆ ಪಕ್ಷ ಇಲ್ಲ. ಇವರು ಪಕ್ಷದ ಆಧಾರ ಸ್ಥಂಭ.
ಹೀಗಾಗಿ ಈ ಪಕ್ಷವನ್ನು ಮಾಸ್ ಬೇಸ್ ಪಾರ್ಟಿಯಿಂದ ಕೇಡರ್ ಬೇಸ್ ಪಕ್ಷವನ್ನಾಗಿ ಮಾಡಲು ತೀರ್ಮಾನಿಸಿದ್ದೇವೆ. ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೂಡ ಬೂತ್ ಮಟ್ಟದಲ್ಲಿ ಪಕ್ಷ ಬಲವಾಗುವಂತೆ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾವು ಎಲ್ಲರೂ ದೇಶಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಬೇಕು. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಈ ರಾಷ್ಟ್ರ ಧ್ವಜವನ್ನು ಹಾಕಿಕೊಳ್ಳಲು ಬಿಜೆಪಿ, ಜನತಾದಳ, ಕಮ್ಯುನಿಸ್ಟರಿಗೆ ಶಕ್ತಿ ಇಲ್ಲ. ಆದರೆ ನಿಮಗೆ ಈ ಭಾಗ್ಯ ಇದೆ. ದೇಶ ಕಟ್ಟಲು ಒಂದು ಪಕ್ಷ ಸ್ಥಾಪಿತವಾಗಿದೆ ಎಂದಾದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ನೀವು ಆ ಪಕ್ಷದ ಸದಸ್ಯರಾಗಿರುವುದಕ್ಕೆ ಹೆಮ್ಮೆ ಪಡಿ ಎಂದು ಡಿಕೆಶಿ ಹೇಳಿದರು.
ಬಾಬು ಜಗಜೀವನ್ ರಾಮ್ ಕೊನೆಯಾಸೆ
ಒಮ್ಮೆ ರಾಜ್ಯದ ಯುವ ಘಟಕ, ಎನ್ ಎಸ್ ಯುಐ ಹಾಗೂ ಇತರೆ ಪ್ರತಿನಿಧಿಗಳು ನಾವು ಸಮಾವೇಶಕ್ಕೆ ತೆರಳಿದ್ದಾಗ ರಾಷ್ಟ್ರೀಯ ಅಧ್ಯಕ್ಷರಾದ ರಾಜೀವ್ ಗಾಂಧಿ ಅವರನ್ನು ನೋಡಲು ಕಾಯುತ್ತಿದ್ದೆವು. ಆಗ ಒಬ್ಬ ವಯಸ್ಸಾದವರು ಗೇಟ್ ಬಳಿ ಬಂದಾಗ ಒಳಗಡೆಯಿಂದ ಓಡಿ ಬಂದ ರಾಜೀವ್ ಗಾಂಧಿ ಅವರು ಅವರನ್ನು ಸ್ವಾಗತಿಸಿ ಕರೆದೊಯ್ದು, ಸುಮಾರು ಹೊತ್ತು ಮಾತನಾಡಿಸಿ ಕಳುಹಿಸಿದರು. ನಾವು ಒಳಗೆ ಹೋದಾಗ, ಅವರು ಯಾರು ಎಂದು ಕೇಳಿದೆವು. ಅವರು ಬಾಬು ಜಗಜೀವನ್ ರಾಮ್. ನಾನು ನಿಮ್ಮ ತಾತ, ತಾಯಿ ಜತೆ ಕೆಲಸ ಮಾಡಿದ್ದೀನಿ. ಭಿನ್ನಾಭಿಪ್ರಾಯವಾಗಿ ಬೇರೆ ಪಕ್ಷ ಕಟ್ಟಿದೆ. ನಾನು ಸಾಯೋ ಮುನ್ನ ಕಾಂಗ್ರೆಸಿಗನಾಗಿಯೇ ಸಾಯಬೇಕು ಎಂದು ಹೇಳಿದ್ದಾಗಿ ತಿಳಿಸಿದರು. ಇದು ಈ ಪಕ್ಷಕ್ಕೆ ಇರುವ ಶಕ್ತಿ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಧ್ವಜವೇ ನಮ್ಮ ಧರ್ಮ ಎಂದು ಹೇಳಿದರು.