ರಾಜ್ಯ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಬಡವರಿಗೆ ಮನೆ ಹಂಚಿಕೆ ಮಾಡುವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಗೆ ಅಧಿಕೃತವಾಗಿ ದೂರು ನೀಡಿದ್ದು, ತಕ್ಷಣ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ತಿರುವು ತಂದದ್ದು ಆಳಂದದ ಶಾಸಕರಾದ ಬಿ.ಆರ್. ಪಾಟೀಲ್ ಅವರ ಸಾರ್ವಜನಿಕ ಹೇಳಿಕೆ. ಅವರು ನೀಡಿದ ಹೇಳಿಕೆಯಲ್ಲಿ, ವಸತಿ ಯೋಜನೆಯ ಅಡಿಯಲ್ಲಿ ಮನೆ ಪಡೆಯಬೇಕಾದ ಬಡವರಿಂದ ಲಂಚ ಕೇಳಲಾಗುತ್ತಿದೆ ಎಂಬ ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯನ್ನು ನಂಬಬಹುದಾದ ದಾಖಲೆಯೆಂದು ಪರಿಗಣಿಸಿ, ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, ವಸತಿ ಯೋಜನೆಯಡಿ ಮನೆ ಹಂಚಿಕೆ ವೇಳೆ ಜನರಿಂದ ಹಣ ಪಡೆದು, ಕಾನೂನುಬಾಹಿರವಾಗಿ ಅನರ್ಹ ವ್ಯಕ್ತಿಗಳಿಗೆ ಮನೆ ನೀಡಲಾಗಿದೆ. ಇದರಿಂದ ನೂರಾರು ಬಡ ಕುಟುಂಬಗಳು ನ್ಯಾಯದಿಂದ ವಂಚಿತವಾಗಿವೆ, ಎಂದು ತಿಳಿಸಿದ್ದಾರೆ.
ಸಮಾಜದ ಹಿತಕ್ಕಾಗಿ ಈ ದೂರು ಕುರಿತಂತೆ ರಾಜ್ಯಪಾಲರು ತಕ್ಷಣ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಾಂಗ ತನಿಖೆ ನಡೆಸುವಂತೆ ಕ್ರಮಕೈಗೊಳ್ಳಬೇಕು ಎಂಬುದಾಗಿ ಅವರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸ್ಪಷ್ಟನೆ ಕೇಳುವ ಸಾಧ್ಯತೆಗಳೂ ಇದ್ದು, ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಮತ್ತೆ ಭಾರೀ ಚರ್ಚೆಗೆ ಕಾರಣವಾಗುವ ನಿರೀಕ್ಷೆಯಿದೆ.