ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆ ನಡೆಸಿ ಹಲವು ಪ್ರಮುಖ ಸೂಚನೆಗಳನ್ನು ನೀಡಿದ್ದು, ಮುಂದೆ ಸಂಭವಿಸಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸರ್ಕಾರ ಸಿದ್ಧವಾಗಿರಬೇಕೆಂದು ತಿಳಿಸಿದ್ದಾರೆ.
ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಚಿತವಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ಹೇಳಿದ ಸಿಎಂ, ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಹಂಚಿಕೊಂಡಿದ್ದಾರೆ:
ಮುನ್ನೆಚ್ಚರಿಕೆ ಕ್ರಮ: ಹಿರಿಯ ನಾಗರಿಕರು, ಗರ್ಭಿಣಿಯರು, ಹೃದಯ ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಮಾಡಬೇಕು.
ನಿಗಾ ಕ್ರಮ: ಪ್ರತೀ ವಾರ ಅಥವಾ ಅಗತ್ಯವಿದ್ದರೆ ಮೂರು ದಿನಕ್ಕೊಮ್ಮೆ ಕೋವಿಡ್ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು. ತೀವ್ರ ನಿಗಾ ಜಾರಿಗೆ ತರಬೇಕು.
ಆಸ್ಪತ್ರೆಗಳ ಸಿದ್ಧತೆ: ಗರ್ಭಿಣಿಯರು ಅಥವಾ ಬಾಣಂತಿಯರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸಮರ್ಪಕ ವ್ಯವಸ್ಥೆ ಇರಬೇಕು. ಹಾಸಿಗೆಗಳು, ವೆಂಟಿಲೇಟರ್‌ಗಳು ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳು ಇದ್ದೇ ಇರಬೇಕು. ತುರ್ತು ಪರಿಸ್ಥಿತಿಯಲ್ಲಿ ಇವರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ವರ್ಗಾಯಿಸುವಂತಹ ಪರಿಸ್ಥಿತಿ ಉಂಟಾಗಬಾರದು.
ಮಕ್ಕಳ ಆರೋಗ್ಯ: ಶಿಶುಗಳು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದತ್ತ ಹೆಚ್ಚುವರಿ ಕಾಳಜಿ ವಹಿಸಬೇಕು. ಶಾಲಾ ಮಕ್ಕಳಲ್ಲಿ ಶೀತ, ನೆಗಡಿ ಕಂಡುಬಂದರೆ ಅವರನ್ನು ಶಾಲೆಗೆ ಕಳುಹಿಸಬಾರದು. ಶಾಲೆಗಳಿಗೂ ಈ ಕುರಿತು ನಿರ್ದೇಶನ ನೀಡಲಾಗಿದೆ.
ವಿಮಾನ ನಿಲ್ದಾಣ ತಪಾಸಣೆ: ವಿದೇಶದಿಂದ ಅಥವಾ ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಗೆ ವಿಮಾನ ನಿಲ್ದಾಣಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ.








