ಲಕ್ನೋ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 7 ಜನ ಸಾವನ್ನಪ್ಪಿ, ಸುಮಾರು 7 ಜನ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ 7 ಜನರ ದೇಹಗಳು ಛಿದ್ರ ಛಿದ್ರಗೊಂಡಿವೆ. ಸ್ಫೋಟದ ಶಬ್ದ ಹಲವಾರು ಕಿಲೋಮೀಟರ್ ವರೆಗೂ ಕೇಳಿದೆ. ಕೂಡಲೇ 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಪಟಾಕಿ ಕಾರ್ಖನೆ ಶಾಹಿದ್ (35) ಎಂಬುವವರಿಗೆ ಸೇರಿದ್ದಾಗಿದ್ದು, ಅವರು ಕೂಡ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ, ಕಾರ್ಮಿಕರಾದ ಶಿವನಾರಾಯಣ್, ಶಿವಕಾಂತ್, ಅಶೋಕ್ ಕುಮಾರ್ ಮತ್ತು ಜೈಚಂದ್ರ ಸಾವನ್ನಪ್ಪಿದ ದುರ್ದೈವಿಗಳು. ಸ್ಫೋಟ ಸಂಭವಿಸಿದಾಗ ಸುಮಾರು 18 ಜನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ರಾಸಾಯನಿಕಗಳಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಫೋಟ ಸಂಭವಿಸಿದೆ. ಪಟಾಕಿ ಕಾರ್ಖಾನೆ ಕಾನೂನುಬದ್ಧವಾಗಿದ್ದು, ಸ್ಥಳೀಯ ಆಡಳಿತದಿಂದ ಅಗತ್ಯವಿರುವ ಎಲ್ಲ ಅನುಮತಿ ಹೊಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.