ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿ ಪಡೆದಿದ್ದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಭಾರತ ತಂಡದ ಹೊಸ ಜರ್ಸಿ ಧರಿಸಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಮೂರು ಫಾರ್ಮ್ಯಾಟ್‌ನ ಹೊಸ ಜರ್ಸಿಯನ್ನ ಅನಾವರಣಗೊಳಿಸಲಾಗಿತ್ತು. 2028ರವರೆಗೆ ಅಡಿಡಾಸ್ ಕಂಪನಿಯೂ ಟೀಂ ಇಂಡಿಯಾದ ಕಿಟ್ ಪ್ರಾಯೋಜಕತ್ವ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಮೂರು ಫಾರ್ಮ್ಯಾಟ್‌ನ ಹೊಸ ಜರ್ಸಿಯನ್ನ ಸಹ ಬಿಡುಗಡೆ ಮಾಡಲಾಗಿತ್ತು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಟೆಸ್ಟ್, ಏಕದಿನ ಮತ್ತು ಟಿ20 ಫಾರ್ಮ್ಯಾಟ್‌ನ ಹೊಸ ಜರ್ಸಿಯನ್ನ ಬಿಡುಗಡೆ ಮಾಡಲಾಗಿತ್ತು.
ಹೀಗಾಗಿ ಲಂಡನ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಭಾರತ ತಂಡದ ಆಟಗಾರರು ಇದೇ ಜರ್ಸಿಯನ್ನ ಧರಿಸಿದ್ದರು. ಆದರೆ ಟೀಂ ಇಂಡಿಯಾ ಆಟಗಾರರು ಈವರೆಗೆ ಯಾವುದೇ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳದ ಕಾರಣ ಏಕದಿನ ತಂಡದ ಜರ್ಸಿಯನ್ನ ಧರಿಸಿ ಆಟಗಾರರು ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟೀಂ ಇಂಡಿಯಾದ ಹೊಸ ಜರ್ಸಿಧರಿಸಿ, ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟೀಂ ಇಂಡಿಯಾ ಆಟಗಾರರು ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ವಿಂಡೀಸ್ ವಿರುದ್ಧ ನಡೆಯುವ ಏಕದಿನ ಸರಣಿಯಲ್ಲಿ ಹೊಸ ಜರ್ಸಿಯಲ್ಲಿ ಭಾರತ ತಂಡದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.








