ಯಾದಗಿರಿ : ವೈದ್ಯರ ನಿರ್ಲಕ್ಷ್ಯದಿಂದಾಗಿ ತುಂಬು ಗರ್ಭಿಣಿ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಗೂಡುರು ಗ್ರಾಮದ ಸಂಗೀತಾ(20) ಸಾವನ್ನಪ್ಪಿದ ದುರ್ದೈವಿ. ಸರಿಯಾದ ಸಮಯಕ್ಕೆ ವೈದ್ಯರು ಹೆರಿಗೆ ಮಾಡಿಸದ ಹಿನ್ನೆಲೆಯಲ್ಲಿ ಹೊಟ್ಟೆಯಲ್ಲಿರುವ ಮಗು ಹಾಗೂ ಗರ್ಭಿಣಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹೆರಿಗೆಗಾಗಿ ಸಂಗೀತಾ ಅವರು ಮೇ 3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು. ಸಹಜವಾಗಿ ಆರೋಗ್ಯದಿಂದಲೇ ಕಾಣುತ್ತಿದ್ದರು.
ಮೇ 3ರಂದು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕೂಡ ಆರೋಗ್ಯವಾಗಿಯೇ ಇದ್ದರು. ಬೆಳಿಗ್ಗೆಯೇ ಆಸ್ಪತ್ರೆಗೆ ದಾಖಲಾದರೂ ನಾರ್ಮಲ್ ಹೆರಿಗೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದ ವೈದ್ಯರು, ಸ್ಕ್ಯಾನಿಂಗ್ ಸೇರಿದಂತೆ ಯಾವುದೇ ಚಿಕಿತ್ಸೆ ಮಾಡಿಲ್ಲ. ಹೀಗಾಗಿ ಗರ್ಭಿಣಿಯ ಆರೋಗ್ಯದಲ್ಲಿ ಸಂಜೆ ಏಕಾಏಕಿ ವ್ಯತ್ಯಾಸ ಕಂಡು ಬಂದಿದೆ. ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ವೈದ್ಯರ ವಿರುದ್ಧ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.