ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ (illicit relationship) ಇಟ್ಟುಕೊಂಡಿದ್ದ ಯುವಕನನ್ನು ಆಕೆಯ ಪತಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ(Bengaluru rural district)ಯ ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.
27 ವರ್ಷದ ಪ್ರದೀಪ್ ಕೊಲೆಯಾದ ಯುವಕ. ಕೊಲೆಯಾದ ಯುವಕ ಹಾಗೂ ಕೊಲೆ ಮಾಡಿದ ವೆಂಕಟೇಶ್ ಮಧ್ಯೆ ಈ ಸಂಬಂಧದ ವಿಷಯವಾಗಿ ಜಗಳ ನಡೆದಿತ್ತು. ಆ ನಂತರ ರಾಜಿ ಪಂಚಾಯ್ತಿ ಮಾಡಿ, ಬುದ್ಧಿ ಹೇಳಲಾಗಿತ್ತು. ಆದರೂ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಮುಂದುವರೆದಿತ್ತು. ಹೀಗಾಗಿ ಸಿಟ್ಟಿನಲ್ಲಿ ಪತಿ ವೆಂಕಟೇಶ್ ತನ್ನ ಸ್ನೇಹಿತ ಕೋಳಿ ನಾಗೇಶ್ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಮಾತನಾಡುವುದು ಇದೆ ಎಂದು ಕರೆದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿಯೇ ಯುವಕ ಓಡಿದ್ದಾನೆ. ಆದರೂ ಆತನನ್ನು ಹಿಂಬಾಲಿಸಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.