ಬೆಂಗಳೂರು: ನಗರದಲ್ಲಿ ಮತ್ತೊಂದು ಒಂಟಿ ಮಹಿಳೆಯ ಹತ್ಯೆ ನಡೆದಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಹಾಡಹಗಲೇ ಯಾರೂ ಇಲ್ಲದ ಸಂದರ್ಭದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದ ಮಹಿಳೆಯನ್ನು ನೀಲಂ(30) ಎಂದು ಗುರುತಿಸಲಾಗಿದೆ. ಮೂಲತಃ ಉತ್ತರ ಪ್ರದೇಶದವರಾಗಿರುವ ಮಹಿಳೆ ತಮ್ಮ ಕುಟುಂಬದೊಂದಿಗೆ ಕಳೆದ ಕೆಲವು ವರ್ಷಗಳಿಂದ ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆಯ ಗಂಗಾ ಬ್ಲಾಕ್ ನಲ್ಲಿ ವಾಸಿಸುತ್ತಿದ್ದರು. ಪತಿ ಹಾರ್ಡ್ ವೇರ್ ಶಾಪ್ ಜೊತೆಗೆ ಪೈಂಟಿಂಗ್ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ. ಪ್ರತಿ ದಿನದಂತೆ ಮಕ್ಕಳು ಶಾಲೆಗೆ ಹಾಗೂ ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ನೀಲಂ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆದರೆ, ಮನೆಯಲ್ಲಿನ ಯಾವುದೇ ಒಡವೆ, ಹಣವನ್ನು ಕದ್ದಿಲ್ಲ ಎನ್ನಲಾಗಿದ್ದು, ಕೊಲೆಯ ಹಿಂದೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








