ಭೋಪಾಲ್: ಆಗಾಗ ಆಶ್ಚರ್ಯಕರ ಜಲಚರಗಳು ಹಾಗೂ ಪ್ರಾಣಿಗಳು ನಮ್ಮ ಕಣ್ಣಿಗೆ ಕಾಣುತ್ತಿರುತ್ತವೆ. ಸದ್ಯ ಮನುಷ್ಯರ ಮೇಲೆಯೂ ದಾಳಿ ಮಾಡುವಂತಹ ಮೀನೊಂದು (Fish) ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ನ (Bhopal) ದೊಡ್ಡ ಕೊಳದಲ್ಲಿ ಪತ್ತೆಯಾಗಿದೆ.
ಇಂತಹ ಮೀನುಗಳು ಹೆಚ್ಚಾಗಿ ಅಮೆರಿಕಾದಲ್ಲಿ (America) ಕಂಡು ಬರುತ್ತವೆ. ಆದರೆ, ಸದ್ಯ ಭಾರತದಲ್ಲಿ (India) ಕಂಡು ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಮೀನಿನ ತಲೆ ಭಾಗ ಮೊಸಳೆಯಂತಿದ್ದರೆ, ಶರೀರ ಹಾವಿನ ಮಾದರಿಯಲ್ಲಿದೆ. ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಕೊಳಕ್ಕೆ ಹೋಗಿದ್ದ ವ್ಯಕ್ತಿಯೊಬ್ಬರಿಗೆ ಈ ವಿಚಿತ್ರ ಮೀನು ಕಂಡಿದ್ದು, ಅವರು ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಮೀನುಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ ಭೋಪಾಲ್ ಕೊಳದಲ್ಲಿ ಪತ್ತೆಯಾದ ಮೀನಿನ ಹೆಸರು ಅಲಿಗೇಟರ್ ಗಾರ್ ಫಿಶ್ ಎಂದು ಖಚಿತಪಡಿಸಿದ್ದಾರೆ.
ಈ ಮೀನು ದೊಡ್ಡ ಕೊಳದ ಪರಿಸರ ವ್ಯವಸ್ಥೆ ನಾಶಪಡಿಸುತ್ತದೆ ಎಂದು ತಜ್ಞರು ಭೀತಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಮೀನು ಮನುಷ್ಯರ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ ಎನ್ನಲಾಗಿದೆ.
ಈ ಅಲಿಗೇಟರ್ ಗಾರ್ ಫಿಶ್ ಮನುಷ್ಯರಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ದೊಡ್ಡ ಹೊಂಡದಲ್ಲಿ ಸಿಗುವ ಮೀನಿನ ಉದ್ದ ಸುಮಾರು ಒಂದೂವರೆ ಅಡಿ ಇರುತ್ತದೆ. ಆದರೆ ಹೊಸದಾಗಿ ಪತ್ತೆಯಾದ ಅಲಿಗೇಟರ್ ಗಾರ್ ಫಿಶ್ 12 ಅಡಿ ಉದ್ದವಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ಮೀನು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಂಸಾಹಾರಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದು ಹೇಗೆ ಇಲ್ಲಿಗೆ ಬಂತು ಎಂದು ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.