ಇಂದಿರಾ ಬಾರ್, ನೆಹರು ಹುಕ್ಕಾಬಾರ್ ತೆರೆಯಲಿ ಎಂದ ಸಿಟಿ ರವಿಗೆ ಸಖತ್ ಟಾಂಗ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು: ಇತ್ತೀಚೆಗೆ ಬಿಜೆಪಿ ಸರ್ಕಾರ ಹಿಂದಿನ ಸರ್ಕಾರಗಳ ಯೋಜನೆಯ ಹೆಸರುಗಳನ್ನ ಬದಲಾಯಿಸುತ್ತಾ ಇರುವ ಆರೋಪ ಜೋರಾಗಿ ಸದ್ದು ಮಾಡ್ತಿದೆ.. ಬಿಜೆಪಿ ನಡೆ ವಿರುದ್ಧ ಕಾಂಗ್ರೆಸ್ ನಾಯಕರು ಕೆಂಡ್ ಕಾರುತ್ತಿದ್ದಾರೆ.. ಈ ನಡುವೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಕೇಂದ್ರ ಸರ್ಕಾರ ಧಾನ್ಯಚಂದ್ ಖೇಲ್ ರತ್ನ ಎಂದು ಬದಲಾಸಲಾದ ನಂತರ ಈ ಚರ್ಚೆ ಇನ್ನಷ್ಟು ತೂಕ ಪಡೆದುಕೊಂಡಿದೆ..
ಇದೇ ಸಮಯಕ್ಕೆ ಸರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಟಿ ರವಿ ಅವರು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಸಲಹೆ ನೀಡಿದ್ದಾರೆ.. ಇಂದಿರಾ ಹೆಸರು ಬದಲು ಅನ್ನಪೂರ್ಣೇಶ್ವರಿ ಹೆಸರನ್ನು ಇಡುವಂತೆ ಆಗ್ರಹಿಸಿದ್ದರು. ಇಷ್ಟಕ್ಕೂ ಮೀರಿ ವಿವಾದಾತ್ಮ ಹೇಳಿಕೆ ನೀಡಿರುವ ಸಿಟಿ ರವಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಬಾರ್, ನೆಹರು ಹುಕ್ಕಾ ಬಾರ್ ಎಂಬ ಹೆಸರಲ್ಲಿ ಕ್ಯಾಂಟೀನ್ ತೆಗೆಯಲಿ ಎಂದು ಹೇಳಿ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಗಾಗಿಸಿದ್ದಾರೆ..
ಆದ್ರೆ ಸಿಟಿ ರವಿ ಅವರ ಈ ಹೇಳಿಕೆಗೆ ಖಾರವಾಗಿಯೇ ಉತ್ತರ ನೀಡಿರುವ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಹೆಸರಲ್ಲಿಯೇ ಹುಕ್ಕಾ ಬಾರ್ ತೆರೆಯಬಹುದಿತ್ತಲ್ಲ, ಹಾಗ್ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಗುಜರಾತ್ ಅಹಮದಾಬಾದ್ ನಲ್ಲಿ ಕ್ರೀಡಾಂಗಣಕ್ಕೆ ಮೋದಿ ಹೆಸರಿಟ್ಟಿದ್ದಾರೆ. ದೆಹಲಿಯಲ್ಲಿ ಜೇಟ್ಲಿ ಹೆಸರಿಟ್ಟಿದ್ದಾರೆ. ಬೆಂಗಳೂರಿನ ಯಶವಂತಪುರದಲ್ಲಿ ದೀನ್ ದಯಾಳ್ ಹೆಸರು, ಯಲಹಂಕದಲ್ಲಿ ಸೇತುವೆಗೆ ಸಾವರ್ಕರ್ ಹೆಸರಿಟ್ಟಿದ್ದಾರೆ. ಇದನ್ನೆಲ್ಲ ಹುಕ್ಕಾ ಬಾರ್ ಎಂದು ಕರೆಯಲು ಆಗುತ್ತಾ? ಇದಕ್ಕೆಲ್ಲ ಬಿಜೆಪಿ ನಾಯಕರ ಹೆಸರಿಟ್ಟಿದ್ದಕ್ಕೆ ನಾವು ಎಂದಾದರೂ ಪ್ರಶ್ನೆ ಮಾಡಿದ್ದೇವಾ? ಹೆಸರು ಬದಲಿಸುವಂತೆ ಹೇಳಿದ್ದೇವಾ? ಸಿ.ಟಿ.ರವಿ ಲಘುವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದ್ದಾರೆ..
ಅಲ್ಲದೇ ನಾವು ವಾಜಪೇಯಿ, ಅಡ್ವಾಣಿ ಬಗ್ಗೆ ಮಾತನಾಡಲು ಹೋಗಲ್ಲ. ಬಿಜೆಪಿ ನಾಯಕರ ಬಗ್ಗೆಯೂ ಮಾತನಾಡಿಲ್ಲ, ಸಿಟಿ ರವಿಗೆ ಇತಿಹಾಸವೂ ಗೊತ್ತಿಲ್ಲ, ಗೌರವ ಕೊಡುವುದೂ ಗೊತ್ತಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳುವವರಿಗೆ ಇನ್ನು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೊತ್ತಾಗುತ್ತಾ. ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿದ್ದಾರೆ. ಉನ್ನತ ಹುದ್ದೆಯಲ್ಲಿದ್ದವರು ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ಅಂದ್ಹಾಗೆ ಸಿಟಿ ರವಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ಅವರ ಖರ್ಚಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ. ಈಗ ಇಂದಿರಾ ಕ್ಯಾಂಟೀನನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಮಾಡಲಿ ಎಂದು ಹೇಳಿಕೆ ನೀಡಿದ್ದರು. ನೆಹರು, ಇಂದಿರಾ ಗಾಂಧಿ ಒಳ್ಳೆಯ ಕೊಡುಗೆಗಳನ್ನು ನೆನೆಯೋಣ, ಆದ್ರೆ ಅವರು ಮಾಡಿದ ಎಲ್ಲವನ್ನೂ ಒಪ್ಪಿಕೊಳುವುದ್ದಕ್ಕೆ ನಾವೇನು ಗುಲಾಮರಲ್ಲ ಎಂದು ಕಿಡಿಕಾರಿದ್ದರು. ಇಂದಿರಾ ಕ್ಯಾಂಟೀನ್ ತೆರೆದಿರೋದು ಅವರ ಎಟಿಂಗಳನ್ನ ತುಂಬಿಸಿಕೊಳ್ಳಲೇ ಹೊರತು, ಇಂದಿರಾ ಮೇಲಿನ ಪ್ರೀತಿಯಿಂದಲ್ಲ. ಕಾಂಗ್ರೆಸ್ ಅವರು ಬೇಕಾದ್ರೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಿ ಎಂದು ಕಿಡಿಕಾರಿದ್ದರು.








