ಅನುಭವಿ ಆಟಗಾರ ಜೋ ರೂಟ್(77) ಅವರ ಜವಾಬ್ದಾರಿಯ ಆಟದ ನಡುವೆಯೂ ನ್ಯೂಜಿ಼ಲೆಂಡ್‌ನ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ 282 ರನ್‌ಗಳ ಪೈಪೋಟಿಯ ಮೊತ್ತ ಕಲೆಹಾಕಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿ಼ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್‌ಗಳಿಸಿತು. ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನಿರೀಕ್ಷಿತ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.
ರೂಟ್ ಅರ್ಧಶತಕದ ಆಸರೆ:
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ವಿಕೆಟ್‌ಗೆ ಕೇವಲ 40 ರನ್‌ಗಳ ಜೊತೆಯಾಟ ಕಂಡಿತು. ಇನ್ನಿಂಗ್ಸ್ ಆರಂಭಿಸಿದ ಬೈರ್ಸ್ಟೋವ್(33) ಹಾಗೂ ಮಲಾನ್(14) ನಿರಾಸೆ ಮೂಡಿಸಿದರು. ಬಳಿಕ ಕಣಕ್ಕಿಳಿದ ಜೋ ರೂಟ್, ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಏಕದಿನ ಕ್ರಿಕೆಟ್‌ನ 37ನೇ ಹಾಗೂ ಪ್ರಸಕ್ತ ವಿಶ್ವಕಪ್‌ನ ಮೊದಲ ಅರ್ಧಶತಕ ದಾಖಲಿಸಿದ ರೂಟ್, 86 ಬಾಲ್‌ಗಳಲ್ಲಿ 4 ಬೌಂಡರಿ, 1 ಸಿಕ್ಸ್ ನೆರವಿನಿಂದ 77 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಇವರಿಗೆ ಸಾಥ್ ನೀಡಿದ ನಾಯಕ ಜೋಸ್ ಬಟ್ಲರ್(43) ಅವರುಗಳ ಜವಾಬ್ದಾರಿಯ ಆಟವಾಡಿದರು.
ಆದರೆ ಪ್ರಮುಖ ಬ್ಯಾಟರ್‌ಗಳಾದ ಮೊಯಿನ್ ಅಲಿ(11), ಲಿಯಾಮ್ ಲಿವಿಂಗ್‌ಸ್ಟೋನ್(20) ಅವರುಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೆಳ ಕ್ರಮಾಂಕದಲ್ಲಿ ಬಂದ ಸ್ಯಾಮ್ ಕರನ್(14), ಕ್ರಿಸ್ ವೋಕ್ಸ್(11), ಆದಿಲ್ ರಶೀದ್(15*) ಹಾಗೂ ಮಾರ್ಕ್ ವುಡ್(13*) ಅವರು ಅಲ್ಪಮೊತ್ತಕ್ಕೆ ತಮ್ಮ ಬ್ಯಾಟಿಂಗ್ ಮುಗಿಸಿದರು. ಒಂದು ಹಂತದಲ್ಲಿ ಸುಲಭವಾಗಿ 300ಕ್ಕೂ ಹೆಚ್ಚು ರನ್‌ಗಳಿಸುವ ಅವಕಾಶ ಹೊಂದಿದ್ದ ಇಂಗ್ಲೆಂಡ್, ನಿರ್ಣಾಯಕ ಹಂತದಲ್ಲಿ ವಿಕೆಟ್‌ಗಳನ್ನ ಕಳೆದುಕೊಂಡ ಪರಿಣಾಮ 270 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಕಿವೀಸ್ ಸಂಘಟಿತ ದಾಳಿ:
ನ್ಯೂಜಿ಼ಲೆಂಡ್ ಬೌಲರ್‌ಗಳು ಸಂಘಟಿತ ಪ್ರದರ್ಶನ ನೀಡುವ ಮೂಲಕ ಹಾಲಿ ಚಾಂಪಿಯನ್ ತಂಡದ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಪ್ರಮುಖವಾಗಿ ಮ್ಯಾಟ್ ಹೆನ್ರಿ(3/48) ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ. ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್ ಪ್ರಮುಖ 2 ವಿಕೆಟ್ ಪಡೆದರೆ. ಟ್ರೆಂಟ್ ಬೋಲ್ಟ್ ಹಾಗೂ ರಚಿನ್ ರವೀಂದ್ರ ತಲಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.