ಬೆಂಗಳೂರು: ಸೈಬರ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಜನರು ಒಂದಿಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತಿದ್ದಾರೆ.
ಸಿಲಿಕಾನ್ ಸಿಟಿಯ ಮಹಿಳೆಗೆ ಫೆಡೆಕ್ಸ್ ಎಂಬ ಅಂತಾರಾಷ್ಟ್ರೀಯ ಖಾಸಗಿ ಕಂಪನಿ ಹೆಸರಿನಲ್ಲಿ ಆರೋಪಿಗಳು ವಂಚಿಸಿದ್ದಾರೆ. ಸತತ 36 ಗಂಟೆಗಳ ಕಾಲ ವೀಡಿಯೋ ಕಾಲ್ ಮಾಡಿ, ಮಹಿಳೆಯ ನಗ್ನ ವಿಡಿಯೋ ಪಡೆದು ವಂಚಿಸಿದ್ದಾರೆ. ಮಹಿಳೆಯಿಂದ ಬರೋಬ್ಬರಿ 15 ಲಕ್ಷ ರೂ. ವಂಚಿಸಿದ್ದಾರೆ ಎನ್ನಲಾಗಿದ್ದು, ಅವರು ಈ ಕುರಿತು ದೂರು ನೀಡಿದ್ದಾರೆ.
ಫೆಡೆಕ್ಸ್ ಕಂಪನಿ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿದ್ದಾನೆ. ಥೈಲ್ಯಾಂಡ್ ಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಸುಮಾರು 140 ಗ್ರಾಂ ಮಾದಕ ವಸ್ತು ಪತ್ತೆಯಾಗಿದೆ ಎಂದು ಹೆದರಿಸಿದ್ದಾನೆ. ಆನಂತರ ಆ ಕರೆಯನ್ನು ಸ್ಥಗಿತಗೊಳಿಸದೆ ಮುಂಬೈ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಗೆ ವರ್ಗಾಯಿಸಿದ್ದಾನೆ.
ಆ ವ್ಯಕ್ತಿ ಸ್ಕೈವ್ ಪಿಡಿಯೋ ಡೌನ್ ಲೋಡ್ ಮಾಡಿಕೊಳ್ಳಲು ಹೇಳಿದ್ದಾನೆ. ಮಲಗಿದ್ದರೂ ತಮಗೆ ತಿಳಿಯಬೇಕು. ನಮ್ಮ ಕಣ್ತಪ್ಪಿಸಿ ಆಕೆಯೆ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ. ಆನಂತರ ವಂಚಕ ಮಾನವ ಕಳ್ಳಸಾಗಣೆ ಮತ್ತು ಡ್ರಗ್ಸ್ ದಂಧೆಯಲ್ಲಿ ನಿಮ್ಮ ಆಧಾರ್ ಸಂಖ್ಯೆ ಲಿಂಕ್ ಆಗಿದೆ ಎಂದು ಹೆದರಿಸಿದ್ದಾನೆ. ಸಿಬಿಐ ಅಧಿಕಾರಿ ಎಂದು ಹೇಳಿಕೊಳ್ಳುವ ಮತ್ತೊಬ್ಬ ವ್ಯಕ್ತಿ ಅಭಿಷೇಕ್ ಚೌಹಾಣ್ ಎಂಬಾತನಿಗೆ ವರ್ಗಾಯಿಸಿದ್ದಾನೆ. ಆತ ಆಕೆಯ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆಯೂ ಪ್ರಶ್ನೆ ಮಾಡಿದ್ದಾನೆ. ವೀಡಿಯೋ ಕರೆ ಮಾಡಿದ್ದ ವಂಚಕರು ಆಕೆ ಏನು ಮಾಡಿದರೂ ತಮಗೆ ಗೊತ್ತಾಗಬೇಕು, ಆಕೆ ಕೋಣೆಯಲ್ಲಿ ಮಲಗಿದ್ದರೂ ಅದು ಅವರ ಕಣ್ಗಾವಲಿನಲ್ಲೇ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಅವರ ಖಾತೆಗೆ ವರ್ಗಾಯಿಸುವಂತೆ ಹೇಳಿದ್ದಾರೆ. ಕಿಂಚಿತ್ತೂ ಯೋಚನೆ ಮಾಡದೇ ಆಕೆ, ಸಮೀಪದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಖಾತೆಯಲ್ಲಿದ್ದ 10.7 ಲಕ್ಷ ರೂ. ಹಣವನ್ನು ವಂಚಿಸಿದ್ದಾರೆ. ನಂತರ ಕ್ರೆಡಿಟ್ ಕಾರ್ಡ್ ಮೂಲಕ ಸುಮಾರು 4 ಲಕ್ಷ ರೂ. ವಂಚಿಸಿದ್ದಾರೆ. ಆಕೆಯನ್ನು ನಗ್ನ ಮಾಡಿ ʻನಾರ್ಕೋಟಿಕ್ಸ್ ಪರೀಕ್ಷೆʼಗೆ ಒಳಪಡಿಸಿದ್ದಾರೆ. ಆ ನಂತರ ಆ ವಿಡಿಯೋ ಕಾಲ್ ನಿಂದ ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ್ದಾರೆ. 10 ಲಕ್ಷ ರೂ. ಹಣ ಪಾವತಿಸದಿದ್ದರೆ ಬೆತ್ತಲೆ ವೀಡಿಯೋವನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆಗ ಮಹಿಳೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಆನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.