ನೀವು ಎಷ್ಟೇ ಹೂಂಕರಿಸಿದ್ರೂ ಕನಕಪುರ ಗಡಿದಾಟಲ್ಲ : ಡಿಕೆಶಿಗೆ ಬಿಜೆಪಿ ಡಿಚ್ಚಿ
ಬೆಂಗಳೂರು : ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನೀವು ಎಷ್ಟೇ ಹೂಂಕರಿಸಿದರೂ ಅದು ಕನಕಪುರ ವಿಧಾನಸಭಾ ಕ್ಷೇತ್ರದ ಗಡಿ ದಾಟುವುದಿಲ್ಲ ಎಂಬುದಕ್ಕೆ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಸಾಕ್ಷಿ ಎಂದು ರಾಜ್ಯ ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾಲೆಳೆದಿದೆ.
ಇಂದು ಮೂರು ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮೂರು ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಟ್ವಿಟ್ಟರ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕುಟುಕಿದೆ.
ಇನ್ನು ಟ್ವಿಟ್ಟರ್ ನಲ್ಲಿ ಬಿಜೆಪಿ..
ಡಿಕೆಶಿ ಜೊತೆ ಹೆಗಲುಕೊಟ್ಟು ಹೆಜ್ಜೆ ಹಾಕುವುದಕ್ಕೆ ಸಿದ್ದರಾಮಯ್ಯ ಬಣ ಸಿದ್ದವಿಲ್ಲ ಎಂಬುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ.
ನಾನಿಲ್ಲದೆ ಹೇಗೆ ಗೆಲ್ಲುತ್ತೀರಿ ಎಂಬ ಸಂದೇಶ ನೀಡಲು ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದರು. ಕಾಂಗ್ರೆಸ್ ಸೋತಿದೆ. ಸಿದ್ದರಾಮಯ್ಯ ಎದುರು ಸೋಲೊಪ್ಪಿಕೊಳ್ಳುತ್ತೀರಾ ಡಿ.ಕೆ.ಶಿವಕುಮಾರ್ ಎಂದು ಪ್ರಶ್ನಿಸಿದೆ.
ಮಾನ್ಯ ಸಿದ್ದರಾಮಯ್ಯ ಅವರೇ, ಚುನಾವಣೆಯ ಸಂದರ್ಭದಲ್ಲಿ ಸೋಲಿನ ಮುನ್ಸೂಚನೆ ಪಡೆದು ಡಿ.ಕೆ.ಶಿವಕುಮಾರ್ ಅವರನ್ನು ಏಕಾಂಗಿಯಾಗಿಸಿ ಪಿಳ್ಳೆ ನೆಪ ಹೇಳಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದೀರಿ. ಸೋಲಿನ ಭಯದಿಂದ ಪಲಾಯನವಾದ ಅನುಸರಿಸಿದ ನೀವು ಇಂದು ಜನರ ತೀರ್ಪನ್ನು ಜನತಾ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡುತ್ತೀರಾ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಬಿಜೆಪಿ ಚುನಾವಣೆಯಲ್ಲಿ ಗೆದ್ದಾಗ ಸಿದ್ದರಾಮಯ್ಯ ಅವರಿಗೆ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸುವ ಚಟವಿತ್ತು. ಈಗ ಹಣಬಲದಿಂದ ಬಿಜೆಪಿ ಗೆದ್ದಿದೆ ಎನ್ನುತ್ತಿದ್ದಾರೆ. ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಗಾದೆ ಸಿದ್ದರಾಮಯ್ಯ ಅವರಿಗಾಗಿಯೇ ಸೃಷ್ಟಿಸಿದಂತಿದೆ.
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಅನ್ವಯ ಕ್ರಮಕ್ಕೆ ಶಿಫಾರಸು ಮಾಡುತ್ತೀರಾ? ನಗರ ಸ್ಥಳೀಯ ಸಂಸ್ಥೆಗಳ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸೆಗೆ ತೆರಳುವ ಮೂಲಕ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಇದು ಯಾರ ಸೋಲು, ಡಿಕೆಶಿ?
ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನೀವು ಎಷ್ಟೇ ಹೂಂಕರಿಸಿದರೂ ಅದು ಕನಕಪುರ ವಿಧಾನಸಭಾ ಕ್ಷೇತ್ರದ ಗಡಿ ದಾಟುವುದಿಲ್ಲ ಎಂಬುದಕ್ಕೆ ಸ್ಥಳೀಯ ಸಂಸ್ಥೆಗಳ ಫಲಿತಾಂಶವೇ ಸಾಕ್ಷಿ.
ಧನಮದದಿಂದ ಜನಮನ ಗೆಲ್ಲುವುದು ಅಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಿ. ಕಾಂಗ್ರೆಸ್ ಪಕ್ಷ ಪ್ರತಿಹಂತದಲ್ಲೂ ಜನತೆಯ ವಿಶ್ವಾಸ ಕಳೆದುಕೊಳ್ಳುತ್ತಿದೆ.
ಜನಸೇವೆ ಮಾಡುವುದರ ಬದಲಾಗಿ ಹಲವು ದಶಕಗಳಿಂದ ಒಂದು ಕುಟುಂಬದ ಸೇವೆ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ಸ್ಥಳೀಯ ಹಂತದಲ್ಲೂ ಜನರು ತಿರಸ್ಕರಿಸಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.