D K Shivakumar | ಹೊಸ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆಯಿರಿ
ಬೆಂಗಳೂರು : ಹೊಸ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆದು, ಹಳೆ ಪುಸ್ತಕಗಳನ್ನು ಮುಂದುವರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಎಲ್ಲ ಸಮಾಜದ ಮಹನೀಯರಿಗೆ ಅಪಮಾನ ಮಾಡಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಾರಾಯಣ ಗುರುಗಳು, ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ, ಮುರುಘಾ ಮಠದ ಸ್ವಾಮೀಜಿ, ಬಸವಣ್ಣ, ಬುದ್ಧ, ಮಹಾವೀರ, ಅಂಬೇಡ್ಕರ್, ಭಗತ್ ಸಿಂಗ್ ಸೇರಿದಂತೆ ಬಹಳಷ್ಟು ಮಹಾನೀಯರಿಗೆ ಅಪಮಾನ ಮಾಡಿದೆ.
ಬಿಜೆಪಿ ತನ್ನ ಆರ್‌ಎಸ್‌ಎಸ್ ಅಜೆಂಡಾಗಳನ್ನು ಪಠ್ಯ ಪರಿಷ್ಕರಣೆ ಹೆಸರಲ್ಲಿ ಮಕ್ಕಳ ಮೇಲೆ ಪ್ರಯೋಗಿಸಬಾರದು. ನಾವು ಜನರ ಪರವಾಗಿ ಹೋರಾಟವನ್ನು ಮಾಡುತ್ತಿದ್ದೇವೆ, ಈ ಹೋರಾಟವನ್ನು ಮುಂದುವರೆಸುತ್ತೇವೆ.

ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವ ಬಿಜಪಿ ಸರ್ಕಾರದ ಹಠಮಾರಿತನದ ವಿರುದ್ಧ ಮಠ-ಮಾನ್ಯಗಳು, ಸಂಘಟನೆಗಳು, ಎಲ್ಲ ವರ್ಗದ ಜನರು ಧ್ವನಿ ಎತ್ತಬೇಕು. ಹೊಸ ಪುಸ್ತಕಗಳನ್ನು ಕಸದ ಬುಟ್ಟಿಗೆ ಎಸೆದು, ಹಳೆ ಪುಸ್ತಕಗಳನ್ನು ಮುಂದುವರಿಸಬೇಕು.
ಕಾಂಗ್ರೆಸ್ ಪಕ್ಷ ಹಾಗೂ ಸಮಸ್ತ ಕಾಂಗ್ರೆಸಿಗರು ಈ ಹುನ್ನಾರವನ್ನು ಖಂಡಿಸಬೇಕಿದೆ. ಈ ಸಂಬಂಧ ರಾಜ್ಯದ ಕೇಂದ್ರ ಸ್ಥಳಗಳಲ್ಲಿನ ಇಡಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ವ್ಯಕ್ತಪಡಿಸುವಂತೆ ಈಗಾಗಲೇ ತೀರ್ಮಾನಿಸಲಾಗಿದೆ. ಕೆಂಗಲ್ ಹನುಮಂತಯ್ಯ ರಸ್ತೆಯ ಲಾಲ್ ಬಾಗ್ ಗೇಟಿನಿಂದ ಇಡಿ ಕಚೇರಿವರೆಗೆ ನಾವು ಹೆಜ್ಜೆ ಹಾಕಬೇಕಿದೆ.
ಜೂನ್ 13, ಬೆಳಿಗ್ಗೆ 10 ಗಂಟೆಗೆ ಕೆ.ಹೆಚ್ ರಸ್ತೆಯ ಲಾಲ್ ಬಾಗ್ ಗೇಟ್ ಬಳಿ ನಾವೆಲ್ಲ ಸೇರಿ ಇಡಿ ಕಚೇರಿಗೆ ಮುತ್ತಿಗೆ ಹಾಕೋಣ. ಶಾಸಕರು, ಸಂಸದರು, ರಾಜ್ಯದಿಂದ ಬ್ಲಾಕ್ ಮಟ್ಟದವರೆಗಿನ ಎಲ್ಲಾ ನಾಯಕರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.








