ಕೊಲೆ ಆರೋಪದ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿರುವ ವಕೀಲರು, ಬಳ್ಳಾರಿ ಜೈಲು ಅಧಿಕಾರಿಗಳ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದ್ದು, ಸೆಪ್ಟೆಂಬರ್ 30ರ ವರೆಗೂ ಬಂಧನ ಅವಧಿ ವಿಸ್ತರಿಸಲಾಗಿದೆ. ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ” ಬಳ್ಳಾರಿ ಜೈಲಿನಲ್ಲಿರುವ ತಮ್ಮ ಕಕ್ಷಿದಾರರು ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೂ, ಪ್ಲಾಸ್ಟಿಕ್ ಕುರ್ಚಿಯ ವ್ಯವಸ್ಥೆ ಮಾಡಲಾಗಲ್ಲ ಎಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ. ದರ್ಶನ್ ಗೆ ಚೇರ್ ನ ವ್ಯವಸ್ಥೆ ಮಾಡುತ್ತಿಲ್ಲ. ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರ ಭೇಟಿಗೂ ಅವಕಾಶ ಕೊಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗ ನ್ಯಾಯಾಧೀಶರು, ”ಕೈದಿಗಳಿಗೆ ವ್ಯವಸ್ಥೆ ಮಾಡಬೇಕೆಂದು ಜೈಲು ಮ್ಯಾನ್ಯುಯಲ್ನಲ್ಲಿಇದೆ. ಆ ಪ್ರಕಾರ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸುತ್ತಾರೆ. ಕುರ್ಚಿ ಕೊಡುವಂತೆ ಅಧಿಕಾರಿಗಳಿಗೆ ಆದೇಶ ಮಾಡುತ್ತೇನೆ ಎಂದು ಹೇಳಿದ್ದಾರೆ.
ದರ್ಶನ್ ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದ ಹಿನ್ನೆಲೆ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ, ಸಂಬಂಧಿ ಸುಶಾಂತ್ ರೆಡ್ಡಿ, ಆಪ್ತ ಹೇಮಂತ್ ಹಾಗೂ ನಟ ಧನ್ವೀರ್ ಅವರು ಕಾರಾಗೃಹಕ್ಕೆ ಮಂಗಳವಾರ ಭೇಟಿ ನೀಡಿದ್ದರು.