ಸ್ಪರ್ಧಾತ್ಮಕ ತರಬೇತಿಯ ಹಬ್ ಎಂದೇ ಖ್ಯಾತಿಯಾಗಿರುವ ರಾಜಸ್ಥಾನದ ಕೋಟ ಈಗ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ದರ್ವಾಜೆ ಪೇ ದಸ್ತಕ್(ಬಾಗಿಲು ಬಡಿಯುವುದು) ಎಂಬ ವಿನೂನತ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಇದಕ್ಕಾಗಿ ವಾರ್ಡನ್ ಗಳು, ಮೆಸೆ ಕೆಲಸಗಾರರು ಹಾಗೂ ಉಪಹಾರ ಪೂರೈಕೆದಾರರ ನೆರವು ಪಡೆಯುತ್ತಿರುವ ಪೊಲೀಸರು, ಹಾಸ್ಟೆಲ್, ಪೇಯಿಂಗ್ ಗೆಸ್ಟ್ ಗಳಲ್ಲಿರುವ ವಿದ್ಯಾರ್ಥಿಗಳು ಖಿನ್ನತೆ ಹಾಗೂ ಒತ್ತಡಕ್ಕೆ ಒಳಗಾಗಿದ್ದಾರೆಯೇ ಎಂಬುವುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಪ್ರತಿ 11 ಗಂಟೆಯ ವೇಳೆ ಪ್ರತಿ ವಿದ್ಯಾರ್ಥಿಯ ಕೊಠಡಿ ಬಾಗಿಲು ಬಡಿಯುವುದನ್ನು ರೂಢಿ ಮಾಡಿಕೊಳ್ಳುವಂತೆ ವಾರ್ಡನ್, ಪಿಜೆ, ಮೆಸ್ ಕೆಲಸಗಾರರಿಗೆ ತಿಳಿಸಿದ್ದೇವೆ. ವಿದ್ಯಾರ್ಥಿಗಳು ಸರಿಯಾಗಿದ್ದಾರೆಯೇ ಎಂದು ಅವರನ್ನು ಕೇಳಿ ತಿಳಿದುಕೊಳ್ಳುವಂತೆ ಅವರ ಚಟುವಟಿಕೆಗಳನ್ನು ಕೂಡ ಗಮನಿಸುವಂತೆಯೂ ಸೂಚಿಸಲಾಗುತ್ತಿದೆ. ವಿದ್ಯಾರ್ಥಿಗಳು ಖಿನ್ನತ ಅಥವಾ ಅಸಹಜ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬುವುದು ಖಾತ್ರಿಯಾದರೆ, ತಿಳಿಸಬೇಕು ಎಂದು ಹೇಳಲಾಗಿದೆ.
ಜೆಇಇ ಹಾಗೂ ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಪ್ರತಿ ವರ್ಷ 2.5 ಲಕ್ಷ ವಿದ್ಯಾರ್ಥಿಗಳು ಕೋಟಕ್ಕೆ ಬಂದು ತರಬೇತಿ ಕೇಂದ್ರಗಳಿಗೆ ದಾಖಲಾಗುತ್ತಿರುತ್ತಾರೆ. ಆದರೆ, ವಿದ್ಯಾರ್ಥಿಗಳು ಇತ್ತೀಚೆಗೆ ಆತ್ಮಹತ್ಯೆಯ ಹಾದಿಯನ್ನು ಹೆಚ್ಚಾಗಿ ಹಿಡಿಯುತ್ತಿದ್ದಾರೆ. 2023ರಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಲ್ಲಿಯವರೆಗೆ 22 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಆಗಸ್ಟ್ 27ರಂದು ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಪೋಷಕರ ನಿರೀಕ್ಷೆಗಳ ಹೊರೆ, ಉತ್ತಮ ಸಾಧನೆ, ಒತ್ತಡ, ತೀವ್ರ ಸ್ಪರ್ಧೆ, ಬಿಗಿ ವೇಳಾಪಟ್ಟಿ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೋಟದಲ್ಲಿ 3,500 ಹಾಸ್ಟೆಲ್ ಹಾಗೂ 25 ಸಾವಿರ ಪಿಜಿಗಳಿಗೆವೆ ಎನ್ನಲಾಗುತ್ತಿದೆ.