ಮುಂಬಯಿ: ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಸಮಯ ನಿಗದಿಯಾಗಿದ್ದು, ಮಾರ್ಚ್ 22 ರಿಂದ ಆರಂಭವಾಗಲಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಕುರಿತು ಮಾಹಿತಿ ನೀಡಿದ್ದು, ಮಾ.22 ರಂದು ಐಪಿಎಲ್ಗೆ ಚಾಲನೆ ನೀಡಲು ಎದುರು ನೋಡುತ್ತಿದ್ದೇವೆ. 15 ದಿನಗಳ ವೇಳಾಪಟ್ಟಿಯನ್ನು ಮೊದಲು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಐಪಿಎಲ್ 17ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿಲ್ಲ. ಐಪಿಎಲ್ ಈ ಬಾರಿ ವಿದೇಶದಲ್ಲಿ ನಡೆಯುವುದಿಲ್ಲ. ಹೀಗಾಗಿ ನಾವು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗಾಗಿ ಕಾಯುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ನಾವು ಸ್ಥಳ ನಿಯೋಜನೆ ಮಾಡುತ್ತೇವೆ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ 2009 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. 2014 ರಲ್ಲಿ ಮೊದಲ 20 ಪಂದ್ಯಗಳನ್ನು ಯುಎಇಯಲ್ಲಿ ಮತ್ತು ಉಳಿದ ಪಂದ್ಯಗಳು ಭಾರತದಲ್ಲಿ ನಡೆದಿದ್ದವು. ಆದರೆ, 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಭಾರತದಲ್ಲಿಯೇ ನಡೆಸಲಾಗಿತ್ತು.
ಈ ಬಾರಿ ಕೂಡ ಭಾರತದಲ್ಲಿಯೇ ನಡೆಸಲು ಮುಂದಾಗಲಾಗಿದೆ. ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಷ್ಟರಲ್ಲಿಯೇ ಐಪಿಎಲ್ ಪಂದ್ಯಾವಳಿಗಳು ಮುಗಿಯಲಿವೆ. ಕಳೆದ ಬಾರಿಯ ಐಪಿಎಲ್ ನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿತ್ತು.