ಯುಜೀನ್ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಟ್ರೋಫಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಫೈನಲ್‌ನಲ್ಲಿ 83.80 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಎರಡನೇ ಸ್ಥಾನ ಪಡೆದು ರನ್ನರ್-ಅಪ್ ಆಗಿದ್ದಾರೆ. ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಯೂಜೀನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನ ಫೈನಲ್‌ನಲ್ಲಿ 84.24 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ಟ್ರೋಫಿ ಗೆದ್ದಿದ್ದಾರೆ.
ಫಿನ್‌ಲ್ಯಾಂಡ್‌ನ ಆಲಿವರ್ ಹೆಲ್ಯಾಂಡರ್ ಅವರು 83.74 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ 3ನೇ ಸ್ಥಾನ ಪಡೆದರು. ಈ ಮೂಲಕ ನೀರಜ್ ಚೋಪ್ರಾ ಅವರು ಜಾವೆಲಿನ್‌ನಲ್ಲಿ ಡೈಮಂಡ್ ಟ್ರೋಫಿ ಉಳಿಸಿಕೊಂಡ 3ನೇ ಆಟಗಾರನಾಗುವ ದಾಖಲೆಯಿಂದ ವಂಚಿತರಾದರು. ಟೊಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್‌ಗೆ ಇದು ಮೂರನೇ ಡೈಮಂಡ್ ಟ್ರೋಫಿ ಗೆಲುವಾಗಿದೆ. ಜ್ಯೂರಿಚ್ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಅವರನ್ನು ಸೋಲಿಸಿ ಜಾಕುಬ್ ವಡ್ಲೆಜ್ ಟ್ರೋಫಿ ಗೆದ್ದಿದ್ದರು. ಕಳೆದ ವರ್ಷ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.44 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದಿಂದ ನೀರಜ್ ಚೋಪ್ರಾ ಗೆಲುವು ಸಾಧಿಸಿದ್ದರು.
ಏಷ್ಯನ್ ಗೇಮ್ಸ್ ಮೇಲೆ ಕಣ್ಣು ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಅತಿದೊಡ್ಡ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಚಿನ್ನವನ್ನು ಗೆದ್ದಿರುವ ಕಾರಣ 2023ರಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಒಲಿಂಪಿಕ್ ಚಾಂಪಿಯನ್‌ಗೆ ಈ ವರ್ಷ ಬಿಡುವಿಲ್ಲದ ಋತುವಾಗಿದೆ. ಏಷ್ಯನ್ ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಚೋಪ್ರಾಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.