ಪಾಟ್ನಾ: ಬಿಹಾರದ ರಾಜಕೀಯ ಚರಿತ್ರೆಯಲ್ಲಿ ನಿತೀಶ್ ಕುಮಾರ್ ಅವರು ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಅವರು 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅತೀ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರ ಸಾಲಿನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆದರೆ ಈ ರಾಜಕೀಯ ಸಂಭ್ರಮದ ನಡುವೆ ದೇಶದ ಗಮನ ಸೆಳೆದಿರುವುದು ನಿತೀಶ್ ಕುಮಾರ್ ಅವರ ಸರಳ ಜೀವನಶೈಲಿ ಮತ್ತು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರ.
ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನ ಮತ್ತು ಹತ್ತು ಬಾರಿ ಮುಖ್ಯಮಂತ್ರಿ ಗಾದಿ ಏರಿದರೂ ನಿತೀಶ್ ಕುಮಾರ್ ಅವರ ಆಸ್ತಿ ಪಾಸ್ತಿಗಳಲ್ಲಿ ಯಾವುದೇ ಅಸ್ವಾಭಾವಿಕ ಏರಿಕೆಯಾಗಿಲ್ಲ. ಭ್ರಷ್ಟಾಚಾರದ ಕಮಟು ತಟ್ಟದ ಮಿಸ್ಟರ್ ಕ್ಲೀನ್ ಎಂದೇ ಬಿಂಬಿತವಾಗಿರುವ ನಿತೀಶ್ ಕುಮಾರ್, ಇಂದಿಗೂ ಕೇವಲ 21,052 ರೂಪಾಯಿ ನಗದು ಹಣವನ್ನು ಕೈಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಅಚ್ಚರಿಯ ಸಂಗತಿ.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಅಫಿಡವಿಟ್ ಪ್ರಕಾರ, ನಿತೀಶ್ ಕುಮಾರ್ ಅವರ ಒಟ್ಟು ಚರಾಸ್ತಿ ಮೌಲ್ಯ ಸುಮಾರು 16 ಲಕ್ಷ ರೂಪಾಯಿಗಳು. ಇದರಲ್ಲಿ ಬ್ಯಾಂಕ್ ಠೇವಣಿಗಳು, ಹೂಡಿಕೆ ಮತ್ತು ಅವುಗಳ ಬಡ್ಡಿ ಸೇರಿದೆ. ವಿಶೇಷವೆಂದರೆ ಮುಖ್ಯಮಂತ್ರಿಗಳ ಬಳಿ ಬೆಲೆಬಾಳುವ ಐಷಾರಾಮಿ ಕಾರುಗಳಿಲ್ಲ. ಅವರ ಬಳಿ ಇರುವುದು ಕೇವಲ ಒಂದು ಫೋರ್ಡ್ ಇಕೋಸ್ಪೋರ್ಟ್ ಕಾರು ಮಾತ್ರ.
ಇನ್ನು ಕೃಷಿ ಮತ್ತು ಹೈನುಗಾರಿಕೆಯ ಹಿನ್ನೆಲೆಯನ್ನು ಬಿಟ್ಟುಕೊಡದ ನಿತೀಶ್, ತಮ್ಮ ಬಳಿ 13 ದನ ಮತ್ತು 10 ಆಕಳುಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಈ ಜಾನುವಾರುಗಳೇ ಅವರ ಪ್ರಮುಖ ಸಂಪತ್ತಿನ ಭಾಗವಾಗಿದೆ. ಇನ್ನು ಸ್ಥಿರಾಸ್ತಿಯ ವಿಚಾರಕ್ಕೆ ಬಂದರೆ, ದೆಹಲಿಯ ದ್ವಾರಕದಲ್ಲಿ 2004ರಲ್ಲಿ ಖರೀದಿಸಿದ 1000 ಚದರ ಅಡಿಯ ಒಂದು ಫ್ಲ್ಯಾಟ್ ಮಾತ್ರ ಅವರ ಹೆಸರಿನಲ್ಲಿದೆ. ಪ್ರಸ್ತುತ ಇದರ ಮೌಲ್ಯ 1.48 ಕೋಟಿ ರೂಪಾಯಿ. ಒಟ್ಟಾರೆಯಾಗಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲವೂ ಸೇರಿದರೂ ಅವರ ಆಸ್ತಿ ಮೌಲ್ಯ 1.65 ಕೋಟಿ ದಾಟುವುದಿಲ್ಲ.
ಕುತೂಹಲಕಾರಿ ಸಂಗತಿಯೆಂದರೆ, ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಹುತೇಕ ಸಚಿವರ ಆಸ್ತಿ ಮೌಲ್ಯವು ಮುಖ್ಯಮಂತ್ರಿಗಳ ಆಸ್ತಿಗಿಂತಲೂ ದುಪ್ಪಟ್ಟಾಗಿದೆ. ಆದರೂ ನಿತೀಶ್ ಕುಮಾರ್ ಅವರ ಮೇಲಿರುವ ಪ್ರಾಮಾಣಿಕತೆಯ ಮುದ್ರೆ ಮತ್ತು ಸರಳ ವ್ಯಕ್ತಿತ್ವವೇ ಬಿಹಾರದ ಜನತೆ ಅವರ ಮೇಲೆ ಮತ್ತೆ ಮತ್ತೆ ನಂಬಿಕೆ ಇಡಲು ಪ್ರಮುಖ ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಐತಿಹಾಸಿಕ ಪ್ರಮಾಣವಚನ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಕ್ಷಿಯಾದರು. ನಿತೀಶ್ ಕುಮಾರ್ ಅವರೊಂದಿಗೆ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹ, ವಿಜಯ್ ಕುಮಾರ್ ಚೌಧರಿ, ಸೇರಿದಂತೆ ಪ್ರಮುಖ ನಾಯಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಒಂದೆಡೆ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರು ಹೊಸ ಸರ್ಕಾರಕ್ಕೆ ಶುಭಕೋರಿದರೆ, ಮತ್ತೊಂದೆಡೆ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಅವರು ಮೌನ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ 10ನೇ ಬಾರಿಗೆ ಅಧಿಕಾರ ಹಿಡಿದಿರುವ ನಿತೀಶ್ ಕುಮಾರ್, ತಮ್ಮ ಸರಳತೆ ಮತ್ತು ಆಡಳಿತದ ಮೂಲಕ ಬಿಹಾರವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.






