ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ, ಮಂಡ್ಯ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದಿದ್ದಾರೆ ಎಂದು ಅವರು ಹೇಳಿದರು. ವಿಶೇಷವಾಗಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿರುವ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸ್ಥಳಕ್ಕೆ ತೆರಳಿ ರೈತರ ಧ್ವನಿಯಾಗಿ ನಿಂತಿದ್ದಾರೆ ಎಂದು ಅಶೋಕ್ ಹೇಳಿದರು.
ರಾಜ್ಯ ಸರ್ಕಾರವು ನೀರಾವರಿ ಯೋಜನೆಗಳಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿ ಯೋಜನೆಗಳತ್ತ ತಿರುಗಿಸಿದೆ. ಇದರಿಂದ ನೀರಾವರಿ ಯೋಜನೆಗಳಿಗೆ ಬರುವ ಅನುದಾನದಲ್ಲಿ 30 ಶೇಕಡಾ ಕಡಿತ ಮಾಡಲಾಗಿದೆ. ಇದು ರೈತರ ಹಿತಕ್ಕೆ ವಿರುದ್ಧವಾದ ಕ್ರಮ, ಎಂದು ಅಶೋಕ್ ಆರೋಪಿಸಿದರು.
ಕೂಡಲೇ ರೈತರ ಬೇಡಿಕೆಗಳನ್ನು ಪೂರೈಸಿ, ಕಬ್ಬು ಬೆಲೆ ನಿಗದಿ ಸೇರಿದಂತೆ ನೀರಾವರಿ ಯೋಜನೆಗಳ ಕಾರ್ಯಗಳನ್ನು ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.








