ಚಂದ್ರಯಾನ-3 ನ್ನು ಭಾರತ ಯಶಸ್ವಿಯಾಗಿ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಲ್ಯಾಂಡಿಂಗ್ ಪ್ರಕ್ರಿಯೆಯ ಲೈವ್ ವೀಕ್ಷಿಸುವ ಜನರು ರೋಮಾಂಚನಗೊಂಡರು.
ಹಲವು ನಗರಗಳಲ್ಲಿ ಜನರು ರಸ್ತೆಗಳಿದು ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ರೈಲು ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿದ್ದ ಪ್ರಯಾಣಿಕರು ಸಹ ಇಸ್ರೋದ ಸಾಧನೆಯ ಮಾಹಿತಿ ತಿಳಿದು ಸಂತೋಷ ವ್ಯಕ್ತಪಡಿಸಿದರು. ಅನಿವಾಸಿ ಭಾರತೀಯರು ಸಹ ತ್ರಿವರ್ಣ ಧ್ವಜ ಹಿಡಿದು ಇಸ್ರೋಗೆ ಧನ್ಯವಾದ ಅರ್ಪಿಸಿದರು.
ಈ ಸುಂದರ ಕ್ಷಣವನ್ನು ಟೀಂ ಇಂಡಿಯಾ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಹಾಗೂ ಅವರ ಪುತ್ರಿ ಝಿವಾ ಕೂಡಾ ಟಿವಿಯಲ್ಲಿ ನೋಡಿ ಸಂಭ್ರಮಿಸಿದ್ದಾರೆ. ಧೋನಿ ಪತ್ನಿ ಸಾಕ್ಷಿ ವಿಡಿಯೋ ಮಾಡಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.