ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Darshan) ಆಂಡ್ ಗ್ಯಾಂಗ್ ಈಗಾಗಲೇ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಸವಿಯುತ್ತಿದೆ. ಆದರೆ, ಪೊಲೀಸರು ಮಾತ್ರ ಎಳೆ ಎಳೆಯಾಗಿ ತನಿಖೆಯನ್ನು ನಡೆಸುತ್ತಿದ್ದಾರೆ.
ದರ್ಶನ್ ಆಂಡ್ ಗ್ಯಾಂಗ್ ಜೈಲು ಸೇರಿ 50 ದಿನ ಕಳೆದಿವೆ. ಆದರೂ ಪೊಲೀಸರು ಮಾತ್ರ ತನಿಖೆ (Investigation)ಯನ್ನು ಇನ್ನೂ ನಡೆಸುತ್ತಿದ್ದಾರೆ. ಬಗೆದಷ್ಟು ಬಗೆದಷ್ಟು ರಹಸ್ಯಗಳು ಪೊಲೀಸರಿಗೆ ಸಿಗುತ್ತಿವೆ.
ರೇಣುಕಾಸ್ವಾಮಿ ಹತ್ಯೆ ನಂತರ ಆರೋಪಿಗಳು ತಪ್ಪಿಸಿಕೊಳ್ಳಲು ಮಾಡಿರುವ ಒಂದೊಂದೇ ತಂತ್ರಗಳು ಈಗ ಬಯಲಾಗುತ್ತಿವೆ. ಮನೆಯಲ್ಲಿನ ಸಿಸಿಟಿವಿ ಡಿಲೀಟ್ ಮಾಡುವುದರಿಂದ ಹಿಡಿದು ಎಲ್ಲಾ ಸಾಕ್ಷ್ಯ ನಾಶಕ್ಕೆ ಆರೋಪಿಗಳು ಯತ್ನಿಸಿದ್ದಾರೆ. ಆದರೆ, ತನಿಖಾಧಿಕಾರಿಗಳು ಅದೆಲ್ಲಾ ಎಫ್ ಎಸ್ ಎಲ್ (FSL) ಮೂಲಕ ರಿಟ್ರೀವ್ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದರ್ಶನ್ ರಾಜಕಾರಣಿಗಳಿಗೆ ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ `ಡೆವಿಲ್’ ಚಿತ್ರದ ಚಿತ್ರೀಕರಣಕ್ಕೆ ತೆರಳುವಾಗ ಕೆಲವೊಂದು ರಾಜಕಾರಣಿಗಳ ಸಹಾಯ ಬಯಸಿದ್ದರಂತೆ. ಅದಕ್ಕಾಗಿಯೇ ವಾಟ್ಸಪ್ ಕಾಲ್ ಮೂಲಕ ಮಾತನಾಡಿದ್ದರು. ನಂತರ ಚಾಟ್, ವಾಟ್ಸಪ್ ಕಾಲ್ ಹಿಸ್ಟರಿ ಎಲ್ಲವನ್ನೂ ಡಿಲೀಟ್ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಮಾಹಿತಿ ರಿಟ್ರೀವ್ ಮಾಡಿ, ಸಾಕ್ಷಿಗಳನ್ನು ರಿಟ್ರೀವ್ ಮಾಡಿ ಒಂದೊಂದೇ ಮಾಹಿತಿ ಬಯಲಿಗೆ ತರುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಸದ್ಯಕ್ಕಂತೂ ದರ್ಶನ್ ಆಂಡ್ ಗ್ಯಾಂಗ್ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ.