ಕಲಬುರಗಿ: ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಸ್ನೇಹಿತರೇ ಕೊಲೆ ಮಾಡಿರುವ ಘಟನೆಯೊಂದು ಬೆಳಿಕಿಗೆ ಬಂದಿದೆ.
ಇತ್ತೀಚೆಗಷ್ಟೇ ಕಲಬುರಗಿ(Kalaburagi) ಜಿಲ್ಲೆಯ ಜೇವರ್ಗಿ(Jevargi) ತಾಲೂಕಿನ ನಾಗರಾಣಿ ಹತ್ತಿರ ಇರುವ ಭೀಮಾ ನದಿಯಲ್ಲಿ ಯುವಕನ ಶವವೊಂದು ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ನೆಲೋಗಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಶವವು 17 ವರ್ಷದ ಶಿವಕುಮಾರ್ ಎಂಬ ಕಾಲೇಜು ವಿದ್ಯಾರ್ಥಿ ಎಂದು ತಿಳಿದು ಬಂದಿತ್ತು. ಕಲಬುರಗಿ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾಮರ್ಸ್ ಓದುತ್ತಿದ್ದ. ಆದರೆ, ಶಿವಕಮಾರ್ ನನ್ನು ಆತನ ಸ್ನೇಹಿತರು, ಅಮವಾಸ್ಯೆಯಾಗಿದ್ದರಿಂದ ದೇವಸ್ಥಾನಕ್ಕೆ ಹೋಗೋಣವೆಂದು ಕರೆದುಕೊಂಡು ಹೋಗಿದ್ದರು. ಆದರೆ, ಶಿವಕುಮಾರ್ ಮಾತ್ರ ಮರಳಿ ಬಂದಿರಲಿಲ್ಲ. ಸ್ನೇಹಿತರು ಮರಳಿ ಬಂದಿದ್ದರು. ಇದರಿಂದಾಗಿ ಸಂಶಯಗೊಂಡ ಪಾಲಕರು, ಸ್ನೇಹಿತರನ್ನು ಪ್ರಶ್ನಿಸಿದರೆ, ಅವರು ಸರಿಯಾಗಿ ಉತ್ತರ ನೀಡಿರಲಿಲ್ಲ. ಆದರೆ, ಪೊಲೀಸರು ತನಿಖೆ ಕೈಗೊಂಡು, ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ.
ಒಂದೇ ಬಡಾವಣೆಯಲ್ಲಿದ್ದ ಇವರೆಲ್ಲ ಕಳೆದ ಅನೇಕ ವರ್ಷಗಳಿಂದ ಸ್ನೇಹಿತರು. ಕೊಲೆಯಾಗಿರುವ ಶಿವಕುಮಾರ್ ಮಾತ್ರ ಕಾಲೇಜಿಗೆ ಹೋಗಿದ್ದರೆ, ಇನ್ನುಳಿದವರು ಆಟೋ ಓಡಿಸಿಕೊಂಡು, ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಶಿವಕುಮಾರ್, ಕೆಲ ತಿಂಗಳ ಹಿಂದೆ ಆರೋಪಿಗಳಿಗೆ 2 ಸಾವಿರ ಹಣ ನೀಡಿದ್ದನಂತೆ. ತಾನು ಕೊಟ್ಟ ಹಣವನ್ನು ಮರಳಿ ನೀಡುವಂತೆ ಕೇಳಿದ್ದನಂತೆ. ಅಷ್ಟೇ ಹಣ ಕೇಳಿದ್ದಕ್ಕೆ ದುಷ್ಕರ್ಮಿಗಳು, ಕೊಲೆ ಮಾಡಿ ನಂತರ ಆತನನ್ನು ಭೀಮಾನ ನದಿ ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.