ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಕ್ಕೆ ತೀವ್ರವಾಗಿ ಕೆರಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಆ ಹುಡುಗ ಇನ್ನೂ ಎಳಸು, ಅವನೊಬ್ಬ ವೇಸ್ಟ್ ಮೆಟೀರಿಯಲ್’ ಎಂದು ಏಕವಚನದಲ್ಲಿ ತೀವ್ರ ವಾಗ್ದಾಳಿ ನಡೆಸುವ ಮೂಲಕ ರಾಜಕೀಯ ವಾಕ್ಸಮರಕ್ಕೆ ಹೊಸ ಕಿಡಿ ಹೊತ್ತಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇಜಸ್ವಿ ಸೂರ್ಯ ವಿರುದ್ಧ ತಮ್ಮ ಆಕ್ರೋಶವನ್ನು ನೇರವಾಗಿಯೇ ಹೊರಹಾಕಿದರು. “ಸುರಂಗ ರಸ್ತೆ ಬೇಡ ಎಂದು ಹೇಳಲು ತೇಜಸ್ವಿ ಸೂರ್ಯ ಯಾರು? ಆತನಿಗೆ ಯಾವುದೇ ಅನುಭವವಿಲ್ಲ. ಗೌರವ ಕೊಟ್ಟು ಮಾತನಾಡಲು ಕರೆದರೆ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಮೊದಲು ಅವನು ತನ್ನ ಪಕ್ಷದ ನಾಯಕರನ್ನು ಕೇಳಿ ಮಾತನಾಡಲಿ. ಒಂದು ವೇಳೆ ಆತ ಕೇಂದ್ರ ಸಚಿವನಾದರೆ, ಈ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಎಲ್ಲಿಯೂ ಸುರಂಗ ರಸ್ತೆಗಳೇ ಬೇಡವೆಂದು ಲೋಕಸಭೆಯಲ್ಲಿ ತೀರ್ಮಾನಿಸಲಿ ನೋಡೋಣ” ಎಂದು ಸವಾಲು ಹಾಕಿದರು.
‘ಕಾರು ಇಲ್ಲದಿದ್ದರೆ ಹೆಣ್ಣು ಕೊಡುವುದಿಲ್ಲ’ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ತೇಜಸ್ವಿ ಸೂರ್ಯ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, “ಅದನ್ನೇ ಹಿಡಿದುಕೊಂಡು ಮಾತನಾಡುತ್ತಿದ್ದಾರೆ. ಹಾಗಾದರೆ ಈತ ಏಕೆ ಕಾರಿನಲ್ಲಿ ಓಡಾಡುತ್ತಿದ್ದಾನೆ? ಆತ ಮತ್ತು ಆತನ ಕುಟುಂಬದವರು ಮೊದಲು ಮೆಟ್ರೋ, ಸರ್ಕಾರಿ ಬಸ್‌ಗಳನ್ನು ಬಳಸಲಿ. ಅವರ ಪಕ್ಷದ ಶಾಸಕರು, ಮುಖಂಡರು ಕೂಡ ಮೆಟ್ರೋ, ಆಟೋಗಳಲ್ಲಿ ಓಡಾಡಲಿ. ಬೆಂಗಳೂರಿನಲ್ಲಿ 1.30 ಕೋಟಿಗೂ ಅಧಿಕ ವಾಹನಗಳಿವೆ. ಅವರೆಲ್ಲರಿಗೂ ವಾಹನ ಬಳಸಬೇಡಿ ಎಂದು ಹೇಳಲು ಸಾಧ್ಯವೇ? ಎಂಬುದನ್ನು ಆ ಹುಡುಗ ಅರ್ಥಮಾಡಿಕೊಳ್ಳಬೇಕು” ಎಂದರು.
ಮೆಟ್ರೋ ಕ್ರೆಡಿಟ್ ನಮ್ಮದು, ಬಿಜೆಪಿ ಕೊಡುಗೆ ಏನು?
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಕೊಡುಗೆಯನ್ನು ಪ್ರಶ್ನಿಸಿದ ಶಿವಕುಮಾರ್, “ಈ ರಾಜ್ಯಕ್ಕೆ ಮೆಟ್ರೋ ತಂದವರು ನಾವು (ಕಾಂಗ್ರೆಸ್). ಅವರು (ಬಿಜೆಪಿ) ಕೇಂದ್ರದಿಂದ ರಾಜ್ಯಕ್ಕೆ ಏನು ತಂದಿದ್ದಾರೆ? ಬೆಂಗಳೂರಿನಲ್ಲಿ ಎಷ್ಟು ಪಿಲ್ಲರ್ ಹಾಕಿಸಿದ್ದಾರೆ? ಯೋಜನೆಗೆ ಎಷ್ಟು ಹಣ ತಂದಿದ್ದಾರೆ? ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ಕೇವಲ ಶೇ 11 ರಿಂದ 12 ರಷ್ಟು ಹಣ ನೀಡುತ್ತಿದೆ. ಭೂ ಪರಿಹಾರ ಸೇರಿದಂತೆ ಉಳಿದೆಲ್ಲವನ್ನೂ ನಾವೇ ನೋಡಿಕೊಳ್ಳುತ್ತಿದ್ದೇವೆ” ಎಂದು ಅಂಕಿಅಂಶ ಸಹಿತ ಹೇಳಿದರು.
‘ಅವನೊಬ್ಬ ವೇಸ್ಟ್ ಮೆಟೀರಿಯಲ್, ಖಾಲಿ ಟ್ರಂಕ್’
ಮಾತಿನ ಮಧ್ಯೆ ಮತ್ತಷ್ಟು ಆಕ್ರೋಶಗೊಂಡ ಡಿಕೆಶಿ, “ತೇಜಸ್ವಿ ಸೂರ್ಯ ಒಬ್ಬ ವೇಸ್ಟ್ ಮೆಟೀರಿಯಲ್, ಅವನೊಂದು ಖಾಲಿ ಟ್ರಂಕ್. ಅವರ ಪಕ್ಷದ ಹಿರಿಯ ನಾಯಕರಾದ ಆರ್. ಅಶೋಕ, ಸಿ.ಎನ್. ಅಶ್ವತ್ಥನಾರಾಯಣ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಅವರಂತಹ ನಾಯಕರು ಮಾತನಾಡಿದರೆ ಉತ್ತರ ಕೊಡಬಹುದು, ಅವರಿಗೆಲ್ಲಾ ವಿಷಯ ಅರ್ಥವಾಗುತ್ತದೆ. ಈ ಹುಡುಗನಿಗೆ ಏನೂ ಗೊತ್ತಿಲ್ಲ. ಬೆಂಗಳೂರಿನಲ್ಲಿ ಬಿಆರ್‌ಟಿಎಸ್ (ಬಸ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಮಾಡಲು ಜಾಗ ಎಲ್ಲಿದೆ? ಅದಕ್ಕೆ ಭೂ ಪರಿಹಾರ ಎಷ್ಟಾಗುತ್ತದೆ ಎನ್ನುವ ಕనీಸ ಜ್ಞಾನವೂ ಅವನ ತಲೆಯಲ್ಲಿಲ್ಲ” ಎಂದು ತೀಕ್ಷ್ಣವಾಗಿ ಟೀಕಿಸಿದರು.
ಈ ವಾಗ್ದಾಳಿಯು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯ ಕುರಿತ ಚರ್ಚೆಯನ್ನು ರಾಜಕೀಯ ಸಂಘರ್ಷದ ಮಟ್ಟಕ್ಕೆ ಕೊಂಡೊಯ್ದಿದ್ದು, ಮುಂದಿನ ದಿನಗಳಲ್ಲಿ ಈ ಜಟಾಪಟಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಗಳಿವೆ.








