ರಾಮನಗರ:: ಲೋಕಸಭೆ ಚುನಾವಣೆ (Loksabha Election 2024)ಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿ ಕೇಂದ್ರದಲ್ಲಿ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಮರು ಚುನಾವಣೆಗೆ ಈಗಿನಿಂದಲೇ ತಂತ್ರ ನಡೆಯುತ್ತಿದೆ.
ಸದ್ಯ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆದುಕೊಳ್ಳಲು ಡಿಕೆ ಬ್ರದರ್ಸ್ ಈಗ ಅಖಾಡಕ್ಕೆ ಧುಮುಕಿದ್ದಾರೆ. ಈ ಮೂಲಕ ಲೋಕಸಭೆಯ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಇಂದು ಚನ್ನಪಟ್ಟಣಕ್ಕೆ ಭೇಟಿ ಕೊಟ್ಟಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹತ್ತಕ್ಕೂ ಅಧಿಕ ದೇವಾಲಯಗಳ ದರ್ಶನ ಪಡೆದು ಕ್ಷೇತ್ರದ ಮತದಾರರ ಜೊತೆ ಮಾತುಕತೆ ನಡೆಸಿದ್ದಾರೆ. ಚುನಾವಣಾ ಪ್ರಚಾರದ ರೀತಿಯಲ್ಲಿ ಜನರನ್ನು ಉದ್ಧೇಶಿಸಿ ಮಾತನಾಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಗೆ ಕೇವಲ 15 ಸಾವಿರ ಬಂದಿದ್ದವು. ಆದರೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ 85 ಸಾವಿರ ಬಂದಿವೆ. ಹೀಗಾಗಿ ಇದನ್ನು ಗಮನಿಸಿದರೆ ಕಾಂಗ್ರೆಸ್ ಗೆ ಗೆಲುವಿನ ವಿಶ್ವಾಸ ಮೂಡಿದೆ. ಅಲ್ಲದೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಹಳೇ ನಂಟಿದ್ದು ಇಲ್ಲಿನ ಜನ ನನ್ನ ಮಾತಿಗೆ ಹಾಗೂ ನನ್ನ ಮುಖಕ್ಕೆ ಬೆಲೆ ಕೊಡುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆ ಸೋಲಿನ ನಂತರ ಇದೇ ಮೊದಲ ಬಾರಿಗೆ ಡಿಕೆಶಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಕನಕಪುರ ತಮ್ಮನಿಗೆ ಬಿಟ್ಟು ಕೊಟ್ಟು ಚನ್ನಪಟ್ಟಣವನ್ನು ತಾವು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ, ಚನ್ನಪಟ್ಟಣದಿಂದ ಗೆದ್ದರೆ ಸಿಎಂ ಆಗುತ್ತಾರೆ ಎಂಬ ನಂಬಿಕೆ ಇರುವುದರಿಂದ, ಡಿಕೆಶಿ ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಮತದಾರ ಏನು ಮಾಡುತ್ತಾನೆ ಎಂಬುವುದನ್ನು ಕಾಯ್ದು ನೋಡಬೇಕಿದೆ.