ಹುಬ್ಬಳ್ಳಿ: ಈ ಅವಧಿಯಲ್ಲಿಯೇ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ ಎಂದು ಸಾದ್ವಿ ಭೈರವಿ ಅಮ್ಮ ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ಹೇಳಿದ ಮಾತುಗಳು ಯಾವತ್ತೂ ಸುಳ್ಳಾಗಿಲ್ಲ, ಇದುವರೆಗೆ ನಡೆದ ಭವಿಷ್ಯವಾಣಿಗಳು ಕೂಡಾ ನಿಜವಾಗಿವೆ ಎಂದು ಹೇಳಿದರು.
ಅವರು 3 ವರ್ಷಗಳ ಹಿಂದೆ ಡಿಕೆ ಶಿವಕುಮಾರ್ ಅವರ ಮನೆಗೆ ಹೋಗಿದ್ದಾಗ ನಡೆದ ಸಂಭಾಷಣೆಯನ್ನು ಹಂಚಿಕೊಂಡು, ಮುಂದೆ ಏನಾಗಬಹುದು? ನನ್ನ ಮುಂದಿನ ದಾರಿ ಏನು? ಎಂದು ಶಿವಕುಮಾರ್ ಕೇಳಿದ್ದನ್ನು ನೆನೆಸಿಕೊಂಡರು. ಆ ಸಂದರ್ಭದಲ್ಲಿ ನಾನು ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ ಅಂತ ಹೇಳಿದ್ದೆ, ಅದೇನು ಎಂದು ಕೇಳಿದಾಗ ನಾನು ಅವರ ಭವಿಷ್ಯದ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಸಿದ್ದೆ ಎಂದು ಭೈರವಿ ಅಮ್ಮ ಹೇಳಿದ್ದಾರೆ.
ನಾನು ಊಹೆ ಮಾಡೋದಿಲ್ಲ, ನನ್ನ ಮಾತುಗಳು ಎಲ್ಲರಿಗೂ ಅರ್ಥವಾಗೋದು ಈಗಾಗಲೇ ತಡವಾಗಿರಬಹುದು. ಆದರೆ, ನನ್ನ ಹೇಳಿಕೆ ಯಾವತ್ತೂ ತಪ್ಪಾಗೋಲ್ಲ ಎಂದು ಭೈರವಿ ಅಮ್ಮ ತಮ್ಮ ಮಾತಿನಲ್ಲಿ ದೃಢತೆ ತೋರಿಸಿದ್ದಾರೆ.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಿಎಂ ಸಿದ್ಧರಾಮಯ್ಯನ ಕಾಲಾವಧಿ ಮುಗಿದ ಬಳಿಕ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಹಲವರು ಊಹಿಸುತ್ತಿದ್ದಾರೆ. ಭೈರವಿ ಅಮ್ಮನ ಈ ಹೇಳಿಕೆಯ ನಂತರ, ಈ ವಿಚಾರ ಮತ್ತೆ ಬೆಳಕು ನೋಡಿದೆ.






