ಬಿಜೆಪಿಯವರು ಯಾವ ಮುಖ ಹೊತ್ತು ಮತ ಕೇಳುತ್ತಿದ್ದಾರೆ : ಡಿಕೆಶಿ
ಬೆಂಗಳೂರು : ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಕಣ ರಂಗೇರಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈಗಾಗಲೇ ಕದನ ರಣಾಂಗಣಕ್ಕೆ ಧುಮುಕಿ ಭರ್ಜರಿ ಮತಯಾಚನೆ ಮಾಡುತ್ತಿವೆ. ರಾಜಕೀಯ ನಾಯಕರು ಪರಸ್ಪರ ವಾಗ್ಬಾಣಗಳನ್ನು ಬಿಡುತ್ತಾ, ಪ್ರತಿಸ್ಪರ್ಧಿಗಳಿಗೆ ಟಾಂಗ್ ನೀಡುತ್ತಿದ್ದಾರೆ.
ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾನಗಲ್ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದು, ಭಾಷಣದ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರ, ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಈಗ ಅನ್ನದಾತರ ಆದಾಯ ಡಬಲ್ ಆಗಿದೆಯೇ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಅಲ್ಲದೆ ಕೊರೊನ ವೇಳೆ ಸರ್ಕಾರವಾಗಲಿ, ಬಿಜೆಪಿ ಶಾಸಕರು, ಸಚಿವರಾಗಲಿ ನಿಮ್ಮ ಸಹಾಯಕ್ಕೆ ಬಂದರೆ? ಸರ್ಕಾರಗಳೇ ಘೋಷಿಸಿದ ಪರಿಹಾರವನ್ನು ನಿಮ್ಮ ಖಾತೆಗೆ ಜಮೆ ಮಾಡಿದರೆ? ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಗೊಬ್ಬರ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಕಡಿಮೆ ಮಾಡಿವೆಯೇ? ಕೊರೋನ ವೇಳೆ ಹೇಳಿದಂತೆ ಸರ್ಕಾರ ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಿದೆಯೇ? ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕಲ್ಪಿಸಿದೆಯೇ? ಹಾಗಿದ್ದರೆ ಬಿಜೆಪಿಯವರು ಯಾವ ಮುಖ ಹೊತ್ತು ಮತ ಕೇಳಲು ಬಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.