ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪ್ರಸಿದ್ಧ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ, ಪಕ್ಷದಲ್ಲಿ ಅಧಿಕಾರ ಅನುಭವಿಸಲು ಮಾತ್ರ ಹಾತೊರೆಯುವ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾ ಗಾಂಧಿಯವರ 108ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆ, ಮುಂದಿನ ಚುನಾವಣೆ ಮತ್ತು ನಾಯಕರ ಜವಾಬ್ದಾರಿಗಳ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಕೆಲಸ ಮಾಡುವವರು ಮತ್ತು ಫಲ ಉಣ್ಣುವವರು: ಡಿಕೆಶಿ ಮಾತಿನ ಮರ್ಮವೇನು?
ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಇಂದಿರಾ ಗಾಂಧಿಯವರ ಪ್ರಸಿದ್ಧ ತತ್ವವೊಂದನ್ನು ಪ್ರಸ್ತಾಪಿಸಿದ್ದು ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜಗತ್ತಿನಲ್ಲಿ ಎರಡು ಬಗೆಯ ಜನ ಇರುತ್ತಾರೆ. ಒಬ್ಬ ಕೆಲಸ ಮಾಡುವವನು, ಇನ್ನೊಬ್ಬ ಅದರ ಲಾಭ ಪಡೆಯುವವನು. ನೀವು ಮೊದಲ ಗುಂಪಿಗೆ ಸೇರಿ ಎಂದು ಇಂದಿರಾ ಗಾಂಧಿ ಹೇಳಿದ್ದರು ಎಂಬ ಮಾತನ್ನು ಡಿಕೆಶಿ ಉಲ್ಲೇಖಿಸಿದರು.
ಈ ಮಾತನ್ನು ಡಿಕೆಶಿ ಈಗ ಹೇಳಿದ್ದೇಕೆ ಎನ್ನುವುದಕ್ಕೆ ರಾಜಕೀಯ ವಿಶ್ಲೇಷಕರು ಹಲವು ಅರ್ಥಗಳನ್ನು ಕಲ್ಪಿಸುತ್ತಿದ್ದಾರೆ. ತಾನು ಕಷ್ಟಕಾಲದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದ ಶ್ರಮಜೀವಿ (ಕೆಲಸ ಮಾಡುವವನು) ಆದರೆ ಈಗ ಅಧಿಕಾರ ಬಂದ ಮೇಲೆ ಅದರ ಲಾಭ ಪಡೆಯಲು ಅನೇಕರು ಮುಗಿಬಿದ್ದಿದ್ದಾರೆ (ಲಾಭ ಪಡೆಯುವವರು) ಎಂಬ ಅರ್ಥದಲ್ಲಿ ಅವರು ಸ್ವಪಕ್ಷೀಯ ನಾಯಕರಿಗೇ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. ಅಧಿಕಾರಕ್ಕಾಗಿ ಲಾಬಿ ನಡೆಸುವ, ಆದರೆ ಪಕ್ಷ ಸಂಘಟನೆಗೆ ಶ್ರಮಿಸದ ನಾಯಕರಿಗೆ ಈ ಮೂಲಕ ಡಿಕೆಶಿ ಖಡಕ್ ಸಂದೇಶ ರವಾನಿಸಿದ್ದಾರೆ.
ಅಧ್ಯಕ್ಷ ಸ್ಥಾನ ಶಾಶ್ವತವಲ್ಲ: ಬದಲಾವಣೆಯ ಮುನ್ಸೂಚನೆ
ಕಳೆದ ಐದೂವರೆ ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ನಾನು ಪರ್ಮನೆಂಟ್ ಆಗಿ ಈ ಸ್ಥಾನದಲ್ಲಿರಲು ಸಾಧ್ಯವಿಲ್ಲ. ಬೇರೆಯವರಿಗೂ ಅವಕಾಶ ನೀಡಬೇಕಾಗಿದೆ ಎಂದು ಹೇಳುವ ಮೂಲಕ ಡಿಕೆಶಿ ಅಧ್ಯಕ್ಷ ಸ್ಥಾನ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದರು.
ಡಿಸಿಎಂ ಆದ ತಕ್ಷಣವೇ ನಾನು ಈ ಸ್ಥಾನ ಬಿಡಲು ನಿರ್ಧರಿಸಿದ್ದೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲ್ ಗಾಂಧಿ ಅವರು, ಮುಂದುವರಿಯಿರಿ ಡಿಕೆ ಎಂದು ಸೂಚಿಸಿದ್ದರಿಂದ ಇಲ್ಲಿಯವರೆಗೂ ಮುಂದುವರಿದಿದ್ದೇನೆ. ಶೀಘ್ರದಲ್ಲೇ ನನ್ನ ಅವಧಿ ಆರು ವರ್ಷ ತುಂಬಲಿದ್ದು, ಬದಲಾವಣೆ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿ ಮರೆತವರಿಗೆ ಹೈಕಮಾಂಡ್ ಚಾಟಿ
ಕೆಲವು ನಾಯಕರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ. ಅಧಿಕಾರ ಸಿಕ್ಕ ಮೇಲೆ ಪಕ್ಷವೆಂಬ ದೇವಸ್ಥಾನಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ಹೊರಹಾಕಿದರು. ಅಂತಹ ನಾಯಕರ ಪಟ್ಟಿಯನ್ನು ಈಗಾಗಲೇ ಹೈಕಮಾಂಡ್ ಗೆ ಕಳುಹಿಸಿದ್ದೇನೆ. ನಾನು ಅವರಿಗೆ ಉತ್ತರ ಕೊಡುವುದಿಲ್ಲ, ದೆಹಲಿಯ ನಾಯಕರು ಸೂಕ್ತ ಸಮಯದಲ್ಲಿ ಅವರಿಗೆ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಗುರಿ 2028: ಅಧಿಕಾರಕ್ಕಿಂತ ಪಕ್ಷ ಮುಖ್ಯ
ನಾನು ಅಧಿಕಾರದಲ್ಲಿ ಇರುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ಆದರೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದೇ ನನ್ನ ಏಕೈಕ ಗುರಿ. ಅಧಿಕಾರ ಮತ್ತು ಕುರ್ಚಿ ಮುಖ್ಯವಲ್ಲ, ನಮ್ಮ ಶ್ರಮಕ್ಕೆ ತಕ್ಕ ಫಲ ಸಿಗೇ ಸಿಗುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ, ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲವಿದೆ ಎಂಬ ಸೂತ್ರವನ್ನು ನಂಬಿ ಮುನ್ನಡೆಯೋಣ ಎಂದು ಕರೆ ನೀಡಿದರು.
ಇಂದಿರಾ ಗಾಂಧಿಯವರ ಜನ್ಮದಿನದ ವೇದಿಕೆಯನ್ನು ಬಳಸಿಕೊಂಡು ಡಿ.ಕೆ. ಶಿವಕುಮಾರ್ ಅವರು ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದಿದ್ದಾರೆ. ಒಂದು ಕಡೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮೂಲಕ ಹೊಸಬರಿಗೆ ಅವಕಾಶದ ಬಾಗಿಲು ತೆರೆದರೆ, ಇನ್ನೊಂದೆಡೆ ಕೆಲಸ ಮಾಡದೆ ಅಧಿಕಾರಕ್ಕೆ ಹಾತೊರೆಯುವವರಿಗೆ ಇಂದಿರಾ ಗಾಂಧಿ ಮಾತಿನ ಮೂಲಕ ಚಾಟಿ ಬೀಸಿದ್ದಾರೆ.







