ರಾಮನಗರ: ಮುಖ್ಯಮಂತ್ರಿ ಬದಲಾವಣೆ ಮತ್ತು ಮುಂದಿನ ಸಿಎಂ ಯಾರು ಎಂಬ ಚರ್ಚೆಗೆ ಮತ್ತೊಮ್ಮೆ ಜೀವ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ಕಾಂಗ್ರೆಸ್‌ನಲ್ಲೇ ಆಂತರಿಕ ಅಸಮಾಧಾನದ ಕಿಡಿಯನ್ನು ಹೊತ್ತಿಸಿದೆ. ಸಿದ್ದರಾಮಯ್ಯ ಬಳಿಕ ಸತೀಶ್ ಜಾರಕಿಹೊಳಿ ಕೂಡ ಸಿಎಂ ಆಗಬಹುದು ಎಂಬ ಯತೀಂದ್ರ ಹೇಳಿಕೆಗೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ರಾಮನಗರದ ಅಂಕನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರ ಹೇಳಿಕೆಯನ್ನು ‘ಎಳಸು ಸ್ಟೇಟ್‌ಮೆಂಟ್’ ಎಂದು ಬಣ್ಣಿಸುವ ಮೂಲಕ ನೇರ ವಾಗ್ದಾಳಿ ನಡೆಸಿದರು.
‘ನಿಮ್ಮ ಮಾತು ಇನ್ನೂ ಬಲಿತಿಲ್ಲ’
ಯತೀಂದ್ರ ಅವರ ಹೇಳಿಕೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಇಕ್ಬಾಲ್ ಹುಸೇನ್, “ಅವರೊಬ್ಬರು ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಗ. ಇಂತಹ ಎಳಸು ಸ್ಟೇಟ್‌ಮೆಂಟ್‌ಗಳನ್ನು ಕೊಡಬಾರದು. ನಿಮ್ಮ ಮಾತು ಇನ್ನೂ ಬಲಿತಿಲ್ಲ, ನಿಮ್ಮ ಮಾತಿನಲ್ಲಿ ಇನ್ನೂ ಶಕ್ತಿ ಬಂದಿಲ್ಲ. ಇಂತಹ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ನೀವು ದೊಡ್ಡ ಮನೆತನದಲ್ಲಿ, ಗೌರವಯುತ ಸ್ಥಾನದಲ್ಲಿದ್ದೀರಿ. ದಯವಿಟ್ಟು ಗೌರವಯುತವಾದ ಹೇಳಿಕೆಗಳನ್ನು ನೀಡಿ. ನೀವಾಗಿ ಕೆಳಗೆ ಬೀಳುವುದು ನಮಗಾರಿಗೂ ಇಷ್ಟವಿಲ್ಲ” ಎಂದು ಖಡಕ್ ಮಾತುಗಳಲ್ಲಿ ಎಚ್ಚರಿಸಿದರು.
‘ನಾವು ಮಾಡಿದ್ರೆ ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ’
ಯತೀಂದ್ರ ಅವರ ಹೇಳಿಕೆಗೆ ಕೆಪಿಸಿಸಿಯಿಂದ ಯಾವುದೇ ನೋಟಿಸ್ ಜಾರಿಯಾಗದ ಕುರಿತು ಕೇಳಿದ ಪ್ರಶ್ನೆಗೆ, ಪಕ್ಷದೊಳಗಿನ ತಾರತಮ್ಯದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. “ನಾವು ಮಾಡಿದ್ರೆ ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಎನ್ನುವಂತಹ ಪರಿಸ್ಥಿತಿ ಇದೆ. ಆದರೆ ಆ ಬಗ್ಗೆ ನಾನೇನೂ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿದ ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಈ ವಿಷಯವಾಗಿ ನನ್ನ ಮೌನವೇ ಉತ್ತರ,” ಎಂದು ಹೇಳಿದರು.
ಪಕ್ಷಕ್ಕಾಗಿ ಡಿಕೆಶಿ ಶ್ರಮ ಅಪಾರ
ಇದೇ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡ ಇಕ್ಬಾಲ್ ಹುಸೇನ್, “ಡಿ.ಕೆ. ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷವನ್ನು ಸಂಘಟಿಸಲು ಅವರು ಪಡುತ್ತಿರುವ ಶ್ರಮ ಎಲ್ಲರಿಗೂ ತಿಳಿದಿದೆ. ಯೂತ್ ಕಾಂಗ್ರೆಸ್ ಹಂತದಿಂದ ಬಂದು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ನಮಗೆಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಾರೂ ಕೂಡ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ನೀಡಬಾರದು,” ಎಂದು ಯತೀಂದ್ರ ಅವರ ಹೆಸರೆತ್ತದೆ ಚಾಟಿ ಬೀಸಿದರು.
ಹಿನ್ನೆಲೆ ಏನು?
ಕೆಲ ದಿನಗಳ ಹಿಂದೆ ಮಾತನಾಡಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, “ನನ್ನ ತಂದೆ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅವರ ಬಳಿಕ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಕೂಡ ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ,” ಎಂದು ಹೇಳಿದ್ದರು. ಈ ಹೇಳಿಕೆಯು, ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ. ಶಿವಕುಮಾರ್ ಅವರ ಬಣವನ್ನು ಕೆರಳಿಸಿದ್ದು, ಇದೀಗ ಇಕ್ಬಾಲ್ ಹುಸೇನ್ ಅವರ ಮೂಲಕ ಬಹಿರಂಗವಾಗಿಯೇ ತಿರುಗೇಟು ವ್ಯಕ್ತವಾಗಿದೆ. ಈ ಘಟನೆಯು ಕಾಂಗ್ರೆಸ್‌ನಲ್ಲಿನ ಸಿಎಂ ಸ್ಥಾನದ ಆಂತರಿಕ ಪೈಪೋಟಿ ಇನ್ನೂ ಜೀವಂತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.








