ಬೆಂಗಳೂರು: ದಲಿತರಿಗೆ (Dalits) ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸುವುದರ ಮೂಲಕ ವಿಧವೆಯರ ಆಸ್ತಿಯನ್ನೂ ಕಬಳಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದ್ದಾರೆ.
ದೋಸ್ತಿಗಳ ಮೈಸೂರು ಚಲೋ ಪಾದಯಾತ್ರೆ ವೇಳೆ ಮಾತನಾಡಿದ ಅವರು, ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ (DCM) ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನ ಡಿಕೆ ಶಿವಕುಮಾರ್ ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಕಬಳಿಸಿದ್ದಾರೆ. ಇವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ನಾನು ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ಮೋಸ ಮಾಡಿಲ್ಲ. ಇವರಂತೆ ಧಮ್ಕಿ ಹಾಕಿ ಆಸ್ತಿ ಮಾಡಿಲ್ಲ. ನಾನು ಹಾಗೆ ಮಾಡಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.
ಯೋಧರೊಬ್ಬರ ಹೆಣ್ಣು ಮಗಳೊಬ್ಬಳನ್ನ ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದಾರೆ. ಆ ಹೆಣ್ಣುಮಗಳ ಕಿಡ್ನ್ಯಾಪ್ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದೀರಿ. ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಡಿ.ಕೆ ಶಿವಕುಮಾರ್ (DK Shivakumar) ವಿರುದ್ಧ ಲೇವಡಿ ಮಾಡಿದ್ದಾರೆ.
ಡಿಕೆಶಿ ಮಾಡಿರುವ ಭ್ರಷ್ಟಾಚಾರದ ತನಿಖೆ ನಡೆಸಲು ಹತ್ತತ್ತು ಸಿಬಿಐ, ಇಡಿ ಸಂಸ್ಥೆಗಳನ್ನು ಸ್ಥಾಪನೆ ಮಾಡಬೇಕಾಗುತ್ತದೆ. ಶಿವಕುಮಾರ್‌ಗೆ ಭಕ್ತಿ ಗೌರವ ಇದ್ದರೆ ಪ್ರಮಾಣ ಮಾಡಲಿ. ನೀವು ಪ್ರಾಮಾಣಿಕವಾಗಿ ಬೆಳೆದು ಬಂದ್ರಾ ಅಂತ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಶಾಸಕರು ಇವರ ಅಕ್ರಮದ ಬಗ್ಗೆ ದಾಖಲೆಗಳ ಸಮೇತ ಮಾತಾಡಿದ್ದಾರೆ. ಮೈಸೂರು ನಗರದ ಉಸ್ತುವಾರಿಯನ್ನು ಸಿಎಂ ಅವರೇ ವಹಿಸಿಕೊಂಡಿದ್ದಾರೆ. ಸಿಎಂ ತಮ್ಮ ಪತ್ನಿ ಹೆಸರಲ್ಲಿ 14 ಸೈಟು ಪಡೆಯಲು ನಮ್ಮ ವಿರೋಧ ಇಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ಇಲ್ಲಿ ನಿಂಗ, ಜವರ, ದೇವರಾಜ, ದಲಿತ ಅನ್ನೋ ಪ್ರಶ್ನೆ ಇಲ್ಲ. ನಕಲಿ ದಾಖಲೆ ಸೃಷ್ಟಿಸಿ 15 ಸೈಟುಗಳನ್ನು ತಗೊಂಡಿದ್ದಾರೆ. ಇದು ತಪ್ಪು. ಇದು ಕಾನೂನು ಬಾಹಿರ ಎಂದು ಆರೋಪಿಸಿದ್ದಾರೆ.