ಮಂಡ್ಯ: ನಾಗಮಂಗಲದ ಕೋಮುಗಲಭ (Nagamangala Violence) ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಅಲ್ಲದೇ, ಹಲವು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಸದ್ಯ ನಷ್ಟ ಹೊಂದಿದವರಿಗೆ ಪರಿಹಾರ ನೀಡಲು ಸರ್ಕಾರ ಮುಂದಾಗಿದ್ದು, ಮಂಡ್ಯ ಜಿಲ್ಲಾಡಳಿತ ಗಲಭೆಯಿಂದ ನಷ್ಟವಾಗಿರುವ ಆಸ್ತಿ ಮೌಲ್ಯವನ್ಮು ಅಂದಾಜಿಸಿದೆ.
ಮಂಡ್ಯ (Mandya) ಜಿಲ್ಲೆ ನಾಗಮಂಗಲದ ಗಲಭೆಯಲ್ಲಿ ಕಿಡಿಗೇಡಿಳು ಹಚ್ಚಿದ ಬೆಂಕಿಯಿಂದ ಪಟ್ಟಣದಲ್ಲಿ ಅಶಾಂತಿ ಉಂಟಾದರೆ, ಹಲವು ಜನರ ಬದುಕು ಬೀದಿಗೆ ಬಂದಿದೆ. ಕೋಮು ದಳ್ಳುರಿಗೆ ಗಲಭೆಕೋರರು ಹಚ್ಚಿದ ಬೆಂಕಿಯಿಂದ ಇಲ್ಲಿನ ಹಲವು ವ್ಯಾಪಾರಿಗಳ ಕನಸು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಈಗಾಗಲೇ ನಷ್ಟವನ್ನು ಅಂದಾಜು ಮಾಡಲಾಗಿದ್ದು, ಗಲಭೆಯಿಂದ ಹಾನಿಗೆ ಒಳಗಾಗಿರುವ ಕಟ್ಟದ ಪ್ರಮಾಣ ಮೌಲ್ಯ 1.47 ಕೋಟಿ ರೂ. ಹಾಗೂ ಬೆಂಕಿಯ ಕೆನ್ನಾಲೆಗೆ ಸುಟ್ಟು ಕರಕಲಾದ ಸರಕಿನ ಮೌಲ್ಯ 1.18 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ವರದಿಯನ್ನು ಸರ್ಕಾರಕ್ಕೆ ನೀಡಿ, ಸೂಕ್ತ ಪರಿಹಾರ ನೀಡವಂತೆ ಮಂಡ್ಯ ಡಿಸಿ ಡಾ.ಕುಮಾರ್ ಪತ್ರ ಬರೆದಿದ್ದಾರೆ. ಗಲಭೆಯಿಂದ ಅಪಾರ ಪ್ರಮಾಣ ಕಟ್ಟಡ ಹಾಗೂ ಸರಕುಗಳು ಹಾನಿಯಾಗಿವೆ. ಸರ್ಕಾರ ಈ ವರದಿಯನ್ನು ಆಧರಿಸಿ ಎಷ್ಟು ಪರಿಹಾರವನ್ನು ಘೋಷಣೆ ಮಾಡಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.