ಕೋಲ್ಕತ್ತಾ: ತರಬೇತಿ ವೈದ್ಯೆಯ (Trainee Doctor) ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ನ್ಯಾಯಾಲಯವು ಬಂಧಿತ ಆರೋಪಿ ಸಂಜಯ್ ರಾಯ್ ನನ್ನು 14 ದಿನಗಳವರೆಗೆ ಪೊಲೀಸ್ (Kolkata Police) ಕಸ್ಟಡಿಗೆ ನೀಡಿದ್ದು, ವಿಚಾರಣೆ ವೇಳೆ ಹಲವು ಭಯಾನಕ ವಿಷಯಗಳು ಬಯಲಿಗೆ ಬಂದಿವೆ.
ಆರೋಪಿ ವಿಚಾರಣೆ ನಡೆಸುತ್ತಿದ್ದ ವೇಳೆ ಆತನ ಮೊಬೈಲ್ ನಲ್ಲಿ ಪೋರ್ನ್ ವೀಡಿಯೋಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಸಂಜಯ್ ರಾಜ್ ಖಾಸಗಿ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಈತನನ್ನು ಫ್ರೆಂಡ್ಸ್ ಆಫ್ ಪೊಲೀಸ್ ಎಂದೂ ಕರೆಯುತ್ತಿದ್ದರು. ಬಂಗಾಳ ಪೊಲೀಸರ ಸಹಕಾರಕ್ಕಾಗಿ ಪ್ರಬಲ ಪೊಲೀಸ್ ಕಲ್ಯಾಣ ಮಂಡಳಿಯ ಭಾಗವಾಗಿ ರಚಿಸಿದ್ದ ತಂಡದಲ್ಲಿ ರಾಯ್ ಕೂಡ ಇದ್ದ. ಹೀಗಾಗಿ ಆಸ್ಪತ್ರೆಗೆ ಪ್ರವೇಶಿಸಲು ಆತನಿಗೆ ಸುಲಭವಾಗಿ ಅವಕಾಶ ಸಿಕ್ಕಿತ್ತು.
ರಾಯ್ ಆಸ್ಪತ್ರೆ ಒಳಗೆ ಹೋಗಿರುವುದು ಸಿಸಿಟಿವಿ (CCTV) ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಬ್ಲೂ ಟೂತ್, ಇಯರ್ ಫೋನ್ ಅನ್ನು ಎಲ್ಲ ಶಂಕಿತರ ಮೊಬೈಲ್ ಫೋನ್ ಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಲಾಗಿದೆ. ಈ ವೇಳೆ ಬ್ಲೂಟೂತ್ ಮತ್ತು ಇಯರ್ ಫೋನ್ ಆರೋಪಿ ಸಂಜಯ್ ರಾಯ್ನ ಮೊಬೈಲ್ ಫೋನ್ಗೆ ಸ್ವಯಂಚಾಲಿತವಾಗಿ ಕನೆಕ್ಟ್ ಆಗಿವೆ. ಇದನ್ನೇ ಸಾಕ್ಷಿಯನ್ನಾಗಿ ಪರಿಗಣಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಅತ್ಯಾಚಾರ ಎಸಗಿ, ನಂತರ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಆಕೆಯ ಕಣ್ಣು ಮತ್ತು ಬಾಯಿಯಿಂದ ರಕ್ತ ಹರಿಯುತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ದೌರ್ಜನ್ಯ ನಡೆದಿರುವುದು ಬಹಿರಂಗವಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಬಂಧಿತ ಆರೋಪಿಯನ್ನು 14 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇನ್ನೊಂದೆಡೆ ಘಟನೆ ಖಂಡಿಸಿ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.