ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳಲ್ಲಿ ಒಂದಾದ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಿದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಚಾರ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಕಳೆದ ಎರಡು ತಿಂಗಳಿನಿಂದ ಹಣ ಬಾರದೇ ಫಲಾನುಭವಿಗಳು ಕಂಗಾಲಾಗಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷವಾದ ಬಿಜೆಪಿ 5 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದೆ. ಈ ಎಲ್ಲಾ ಗೊಂದಲಗಳ ನಡುವೆ ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಹಿಳೆಯರಿಗೆ ಮಹತ್ವದ ಭರವಸೆಯೊಂದನ್ನು ನೀಡುವ ಮೂಲಕ ಸರ್ಕಾರದ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತಿನ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಸುಮಾರು 5 ಸಾವಿರ ಕೋಟಿ ರೂಪಾಯಿಗಳಷ್ಟು ಮೊತ್ತದ ಈ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂದು ಬಿಜೆಪಿ ನಾಯಕರು ಸದನದಲ್ಲಿ ಹಾಗೂ ಹೊರಗಡೆ ವಾಗ್ದಾಳಿ ನಡೆಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ ಎಂಬ ಟೀಕೆಗಳ ನಡುವೆಯೇ, ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಸರ್ಕಾರದ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು. ಆ ಎರಡು ತಿಂಗಳ ಹಣ ಎಲ್ಲಿಯೂ ಹೋಗಿಲ್ಲ ಮತ್ತು ದುರ್ಬಳಕೆಯೂ ಆಗಿಲ್ಲ. ಕೇವಲ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರಬಹುದು ಅಷ್ಟೇ. ಶೀಘ್ರವೇ ಮಹಿಳೆಯರ ಖಾತೆಗೆ ಬಾಕಿ ಹಣ ಜಮೆಯಾಗಲಿದೆ ಎಂದು ಭರವಸೆ ನೀಡಿದರು.
ಆದಾಯ ತೆರಿಗೆ ಇಲಾಖೆ ಸುಮ್ಮನೆ ಬಿಡುತ್ತಾ?
ಬಿಜೆಪಿಯ ಗೋಲ್ ಮಾಲ್ ಆರೋಪಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 5000 ಕೋಟಿ ರೂಪಾಯಿ ಎನ್ನುವುದು ಸಣ್ಣ ಮೊತ್ತವಲ್ಲ. ಅಷ್ಟು ದೊಡ್ಡ ಮೊತ್ತದ ಹಣ ಸರ್ಕಾರಿ ಖಜಾನೆಯಿಂದ ನಾಪತ್ತೆಯಾದರೆ ಅಥವಾ ದುರ್ಬಳಕೆಯಾದರೆ ಆದಾಯ ತೆರಿಗೆ ಇಲಾಖೆ (IT Department) ಸುಮ್ಮನೆ ಕೂರುತ್ತದೆಯೇ? ಅವರು ತಕ್ಷಣವೇ ಕ್ರಮ ಕೈಗೊಳ್ಳುತ್ತಿದ್ದರು. ಹೀಗಾಗಿ ಹಣ ದುರ್ಬಳಕೆ ಆಗಿದೆ ಎನ್ನುವುದು ಶುರು ಸುಳ್ಳು ಎಂದು ಸಮರ್ಥಿಸಿಕೊಂಡರು.
ಹಣಕಾಸು ಇಲಾಖೆ ಹಾಗೂ ಸಂಬಂಧಪಟ್ಟ ಸಚಿವರು ಶೀಘ್ರದಲ್ಲೇ ಈ ಗೊಂದಲಗಳಿಗೆ ಅಧಿಕೃತವಾಗಿ ತೆರೆ ಎಳೆಯಲಿದ್ದಾರೆ ಎಂದ ಸತೀಶ್ ಜಾರಕಿಹೊಳಿ, ಮುಂದಿನ ತಿಂಗಳುಗಳ ಹಣ ಬಿಡುಗಡೆಯಾಗುವ ಸಂದರ್ಭದಲ್ಲಿ ಬಾಕಿ ಉಳಿದಿರುವ ಹಿಂದಿನ ಎರಡು ತಿಂಗಳ ಹಣವನ್ನೂ ಸೇರಿಸಿ ಫಲಾನುಭವಿಗಳಿಗೆ ತಲುಪಿಸಲಾಗುವುದು. ಹೀಗಾಗಿ ಮಹಿಳೆಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಆರ್ಥಿಕ ಇಲಾಖೆಗೆ ಪತ್ರ ಬರೆದ ವಿಪಕ್ಷ ನಾಯಕ ಆರ್ ಅಶೋಕ್
ಇನ್ನೊಂದೆಡೆ, ಗೃಹಲಕ್ಷ್ಮಿ ಹಣದ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ರಾಜ್ಯ ಆರ್ಥಿಕ ಇಲಾಖೆಗೆ ಸುದೀರ್ಘ ಪತ್ರವೊಂದನ್ನು ಬರೆದು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ.
ಅಶೋಕ್ ಅವರ ಪತ್ರದಲ್ಲಿರುವ ಪ್ರಮುಖ ಪ್ರಶ್ನೆಗಳು:
1. ಹಣ ಪಾವತಿಸದಿರಲು ಕಾರಣವೇನು?: 2024-25ನೇ ಸಾಲಿನ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣವನ್ನು ಫಲಾನುಭವಿಗಳಿಗೆ ಇನ್ನು ಪಾವತಿಸದಿರಲು ನಿಖರವಾದ ಕಾರಣಗಳೇನು?
2. ಬಜೆಟ್ ಅನುದಾನ ಏನಾಯಿತು?: ಕಳೆದ ಬಜೆಟ್ ನಲ್ಲಿ ಫೆಬ್ರವರಿ ಮತ್ತು ಮಾರ್ಚ್ ಕಂತಿಗಾಗಿ ಮೀಸಲಿರಿಸಿದ್ದ ಅನುದಾನ ಎಲ್ಲಿ ಹೋಯಿತು? ಅದು ಖರ್ಚಾಗದಿದ್ದರೆ ಉಳಿದ ಹಣ ಏನಾಯಿತು?
3. ಪೂರಕ ಅಂದಾಜಿನಲ್ಲಿ ಏಕೆ ಸೇರಿಸಿಲ್ಲ?: ಬಾಕಿ ಉಳಿದಿರುವ ಈ ಎರಡು ತಿಂಗಳ ಅನುದಾನವನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆ ಮಾಡಿಲ್ಲ ಮತ್ತು ಪೂರಕ ಅಂದಾಜು ಪಟ್ಟಿಯಲ್ಲೂ ಸೇರಿಸಿಲ್ಲ. ಇದಕ್ಕೆ ಕಾರಣವೇನು?
ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳು ನನ್ನ ಈ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ಕೊಡಿಸುವ ಮೂಲಕ ಕರ್ನಾಟಕದ ಜನತೆಗೆ ಸತ್ಯ ದರ್ಶನ ಮಾಡಿಸಬೇಕು ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ವಿಳಂಬವು ತಾಂತ್ರಿಕ ಸಮಸ್ಯೆಯೋ ಅಥವಾ ವಿಪಕ್ಷಗಳು ಆರೋಪಿಸುತ್ತಿರುವಂತೆ ಆರ್ಥಿಕ ದುರ್ಬಳಕೆಯೋ ಎಂಬುದು ಆರ್ಥಿಕ ಇಲಾಖೆಯ ಅಧಿಕೃತ ಸ್ಪಷ್ಟನೆಯ ನಂತರವಷ್ಟೇ ತಿಳಿಯಲಿದೆ. ಆದರೆ, ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಫಲಾನುಭವಿಗಳಲ್ಲಿ ಕೊಂಚ ನೆಮ್ಮದಿ ತಂದಿರುವುದಂತೂ ಸತ್ಯ.








