ಗಾಂಧಿನಗರ : ಪಾಪಿ ತಾಯಿಯೊಬ್ಬಳು ಪ್ರಿಯಕರನಿಗಾಗಿ ಎರಡೂವರೆ ವರ್ಷದ ಮಗುವನ್ನು ಹತ್ಯೆ ಮಾಡಿರುವ ಘಟನೆಯೊಂದು ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.
ಕೊಲೆ ಮಾಡಿದ ನಂತರ ದೃಶ್ಯಂ (Drishyam) ಸಿನಿಮಾದ ರೀತಿಯಲ್ಲಿ ಮಗುವಿನ ಶವವನ್ನು ವಿಲೇವಾರಿ ಮಾಡಿ, ಮಗು ಅಪಹರಣದ ಪ್ರಕರಣ ದಾಖಲಿಸಿದ್ದಾಳೆ. ಮೂರು ದಿನಗಳ ಕಾಲ ಹುಡುಕಿದರೂ ಮಗು ಸಿಕ್ಕಿಲ್ಲ. ನಂತರ ಪೊಲೀಸರಿಗೆ ತಾಯಿಯ ಮೇಲೆಯೇ ಅನುಮಾನ ಮೂಡಿದೆ. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಬಳಿಕ ಸತ್ಯ ಹೊರ ಬಿದ್ದಿದೆ. ಸೂರತ್ನ ದಿಂಡೋಲಿ ಪ್ರದೇಶದಲ್ಲಿ ಸೈಟ್ ವೊಂದರ ಕಟ್ಟಡದಲ್ಲಿ ಕೂಲಿಕೆಲಸ ಮಾಡುತ್ತಿದ್ದ ನಯನಾ ಮಾಂಡವಿ ತನ್ನ ಪ್ರಿಯಕರನಿಗೋಸ್ಕರ (Boy Friend) ಗಂಡು ಮಗುವನ್ನು ಕೊಲೆ ಮಾಡಿದವಳು.
ಪೊಲೀಸರು ಮಹಿಳೆ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಗು ಕಟ್ಟಡದಿಂದ ಹೊರಬಾರದಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಮಹಿಳೆ ಸರಿಯಾಗಿ ಉತ್ತರಿಸಲಿಲ್ಲ. ಬಳಿಕ ನಾಪತ್ತೆಯಾದ ಮಗುವನ್ನು ಹುಡುಕುವ ಸಲುವಾಗಿ ಶ್ವಾನದಳವನ್ನು ಬಳಸಿದ್ದಾರೆ. ಆದರೆ ಮಗು ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಬಿಟ್ಟು ಆಚೆ ಹೋಗಿರುವ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.
ಬಳಿಕ ಮಹಿಳೆ ತಾನು ತಪ್ಪಿಸಿಕೊಳ್ಳುವ ಸಲುವಾಗಿ ಜಾರ್ಖಂಡ್ನಲ್ಲಿರುವ (Jharkhand) ತನ್ನ ಪ್ರಿಯಕರನೇ ಮಗುವನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಮಹಿಳೆಯ ಮಾಹಿತಿಯ ಆಧಾರದ ಮೇಲೆ ಪ್ರಿಯಕರನನ್ನು ಸಂಪರ್ಕಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ ತಾನು ಸೂರತ್ಗೆ ಬರಲೇ ಇಲ್ಲ ಎಂಬ ಮಾಹಿತಿಯನ್ನು ನೀಡಿದ್ದಾನೆ. ಬಳಿಕ ಪೊಲೀಸರು ಮಹಿಳೆಯ ವಿಚಾರಣೆಯನ್ನು ತೀವ್ರಗೊಳಿಸಿದಾಗ ಆಕೆ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಶೌಚಾಲಯದ ಗುಂಡಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದಾಳೆ. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಮಗುವಿನ ಮೃತದೇಹ ಶೌಚಾಲಯದ ಗುಂಡಿಯಲ್ಲಿ ಪತ್ತೆಯಾಗಿದೆ.








