ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ಪೀಳಿಗೆ ಹಾಳಾಗುತ್ತಿದೆ. ಬೇರೆ ಬೇರೆ ಐಡಿಯಾ ಬಳಸಿ ಡ್ರಗ್ಸ್ ಆಮದು ಮಾಡಿಕೊಳ್ಳುವುದು ಹಾಗೂ ಮಾರಾಟ ಮಾಡುವುದು ಬೆಳಕಿಗೆ ಬರುತ್ತಲೇ ಇದೆ.
ಸಿಸಿಬಿ ಅಧಿಕಾರಿಗಳು ಫುಲ್ ಅಲರ್ಟ್ ಆದ ನಂತರ ಪೆಡ್ಲರ್ ಗಳು ತಮಗೆ ತಿಳಿದ ದಾರಿಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದು, ಸದ್ಯ ಭಾರತೀಯ ಅಂಚೆ ಮೂಲಕ ನಗರ ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ ಪ್ರಕರಣವನ್ನು ಬೇಧಿಸಿದ್ದಾರೆ. ಅಲ್ಲದೇ, ಸಿಸಿಬಿ ಪೊಲೀಸರು ಡ್ರಗ್ಸ್ ಬಂದ ಪಾರ್ಸಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲಕ ಸಿಲಿಕಾನ್ ಸಿಟಿಗೆ ಬಂದಿದೆ. ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಂತರ ಆರೋಪಿಯಿಂದಲೇ ಬಾಕ್ಸ್ ಓಪನ್ ಮಾಡಿಸಿ ನೋಡಿದಾಗ ಚರಸ್ ಇರುವುದು ಪತ್ತೆಯಾಗಿದೆ.
ಬಾಕ್ಸ್ ನಲ್ಲಿ ಸುಮಾರು 6.50 ಲಕ್ಷ ರೂ. ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷ ಎಂಬಾತ ಅಂಚೆ ಮೂಲಕ ಚರಸ್ ಕಳುಹಿಸಿದ್ದಾನೆ ಎನ್ನಲಾಗಿದೆ. ಇತ್ತ ಆರೋಪಿ ಅರೆಸ್ಟ್ ಆಗುತ್ತಿದ್ದಂತೆ ಅದಿತ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ. ಈ ಕುರಿತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.