ಕೃಷಿ ಜಮೀನಿನಲ್ಲಿ ಕುಡಿದು ಮೋಜು ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ನಿವೃತ್ತ ಪೊಲೀಸ್ ಅಧಿಕಾರಿಯನ್ನು ಕೃಷ್ಣಯ್ಯ(61) ಎಂದು ಗುರುತಿಸಲಾಗಿದೆ. ಕೃಷ್ಣಯ್ಯ ಅವರ ಜಮೀನಿನಲ್ಲಿ ಕುಳಿತುಕೊಂಡು ಯುವಕರ ಗುಂಪು ಮದ್ಯ ಸೇವಿಸುತ್ತಿದ್ದರು. ಕುಡಿದು ಎಲ್ಲೆಂದರಲ್ಲಿ ಬಾಟಲಿ ಬಿಸಾಡಿದ್ದರು. ಹೀಗಾಗಿ ಕೃಷ್ಣಯ್ಯ ಅವರು ಇದನ್ನು ಪ್ರಶ್ನಿಸಿದ್ದರು. ಇದಕ್ಕೆ ಕೋಪಗೊಂಡ ಮಹಾದೇವ್, ಹನುಮ, ಕಿರಣ್ ಹಾಗೂ ಅಭಿ ಎಂಬುವವರು ಮಚ್ಚಿನಿಂದ ಕೈ ಕತ್ತರಿಸಿದ್ದಾರೆ.
ಸದ್ಯ ಗಾಯಗೊಂಡ ಕೃಷ್ಣಯ್ಯ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳ ಪೈಕಿ ಕಿರಣ್ ಎಂಬಾತನನ್ನು ಬಂಧಿಸಿ, ಉಳಿದವರಿಗಾಗಿ ಬಲೆ ಬೀಸಲಾಗಿದೆ.








