ಗಣೇಶ ಚತುರ್ಥಿ ಸಂಭ್ರಮ ರಾಜ್ಯದಲ್ಲಿ ಮನೆ ಮಾಡಿದೆ. ದಾವಣಗೆರೆ ಜಿಲ್ಲೆಯಲ್ಲೂ ಕೂಡ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜಿಲ್ಲಾಡಳಿತವು ಪಿಒಕೆ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿದ್ದು, ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸೂಚಿಸಿದೆ. ಈ ನಿಯಮದಂತೆಯೇ ದಾವಣಗೆರೆಯ ಸಿದ್ದಗಂಗಾ ಸ್ಕೂಲ್‌ನಲ್ಲಿ ವಿಶೇಷವಾದ ಗಣೇಶನ ಮೂರ್ತಿ ತಯಾರಿಸಲಾಗಿದೆ. ಸದ್ಯ ಇದು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
ಪರಿಸರ ಸ್ನೇಹಿ ಪೇಪರ್ ಗಣಪನ ನೋಡಲು ಚೆಂದವೋ ಚೆಂದ. ಹನ್ನೆರಡು ಅಡಿ ಎತ್ತರದ ಪರಿಸರ ಸ್ನೇಹಿ ಪೇಪರ್ ಗಣಪತಿಯನ್ನು ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಚಿತ್ರಕಲಾ ಶಿಕ್ಷಕರಾದ ನಟರಾಜ್, ಸ್ವಾತಿ, ಹೀನಾ ಕೌಸರ್, ಪ್ರಿಯಾಂಕ, ಸಹನಾ ಅವರ ಸಹಕಾರದಿಂದ ಸಂಸ್ಥೆಯ ಸಿದ್ಧಲಿಂಗ ಮಂಟಪದಲ್ಲಿ ತಯಾರಿಸಲಾಗಿದ್ದು, ಎಲ್ಲರೂ ಸಂತಸ ಹಾಗೂ ಖುಷಿಯಿಂದ ಜನರು ನೋಡುತ್ತಿದ್ದಾರೆ.
ಈ ಗಣೇಶನನ್ನು ಹಳೆ ದಿನಪತ್ರಿಕೆ, ಡ್ರಾಯಿಂಗ್ ಪೇಪರ್, ಮೈದಾ ಅಂಟು, ಇದ್ದಿಲು ಪುಡಿ ಬಳಸಿ ನಿರ್ಮಿಸುತ್ತಿರುವ ಈ ಬೃಹತ್ ಗಣಪತಿ 20 ಕಿಲೋ ನಷ್ಟು ತೂಕ ಹೊಂದಿದೆ. ವಿಶಿಷ್ಠವಾದ ಈ ಪೇಪರ್ ಗಣಪತಿಯನ್ನು ಸೆಪ್ಟೆಂಬರ್ 28ರಂದು ಅನಂತ ಪದ್ಮನಾಭ ವ್ರತದಂದು ವಿಸರ್ಜಿಸಲಾಗುವುದು ಎಂದು ಶಾಲೆಯ ಮುಖ್ಯಸ್ಥರು ಹೇಳಿದ್ದಾರೆ.