ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‌ಫೋರ್ಸ್‌ಮೆಂಟ್ ಡೈರೆಕ್ಟೊರೇಟ್ (ED) ದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಈ ಕ್ರಮದ ಕುರಿತು ರಾಜಕೀಯ ಚರ್ಚೆಗಳು ಜೋರಾಗಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
“ತಪ್ಪಾಗಿದೆ ಎಂಬುದು ಎಲ್ಲರಿಗೂ ಗೊತ್ತು, ಆದರೆ…”
ದೆಹಲಿಯಲ್ಲಿ ಮಾತನಾಡಿದ ಹರಿಪ್ರಸಾದ್, ವಾಲ್ಮೀಕಿ ನಿಗಮದಲ್ಲಿ ತಪ್ಪು ನಡೆದಿದ್ದು, ಅದು ಎಲ್ಲರಿಗೂ ತಿಳಿದ ವಿಷಯ. ಆದರೆ ಅದರಲ್ಲಿ ಸಚಿವರ ಪಾತ್ರವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಹಾಗಿರುವಾಗ ಕಾಂಗ್ರೆಸ್ ನಾಯಕರ ಮನೆ ಮೇಲೆ ED ದಾಳಿ ನಡೆಸುವುದು ರಾಜಕೀಯ ದಾಳಿಯಾಗಿದೆ ಎಂದು ಹೇಳಿದರು.
ED ಬಿಜೆಪಿ ಅಂಗಸಂಸ್ಥೆ!
ED ವಿರುದ್ಧ ಕಿಡಿಕಾರಿದ ಅವರು, ಇದು ಸಂವಿಧಾನಿಕ ಸಂಸ್ಥೆ ಅಲ್ಲ. ಈಗ ಅದು ಬಿಜೆಪಿ ಪಕ್ಷದ ರಾಜಕೀಯ ಏಜೆನ್ಸಿಯಾಗಿ ಕೆಲಸ ಮಾಡ್ತಾ ಇದೆ. ಬಿಜೆಪಿಯ ರಾಜಕೀಯ ಗುರಿ ಸಾಧಿಸಲು ಇಡಿಯಿಂದ ದಾಳಿ ಮಾಡಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಾನೂನಾತ್ಮಕ ಕ್ರಮವಾಗಲಿ, ಆದರೆ ರಾಜಕೀಯ ಪ್ರೇರಿತವಾಗಬಾರದು
ಯಾವುದೇ ಭ್ರಷ್ಟಾಚಾರ ನಡೆದಿದ್ದರೆ ಅದಕ್ಕೆ ಕಾನೂನಾತ್ಮಕ ಕ್ರಮವಾಗಲೇಬೇಕು. ಆದರೆ ಅದು ರಾಜಕೀಯವಾಗಿ ಪ್ರೇರಿತ ಆಗಬಾರದು. ಸಂವಿಧಾನಾತ್ಮಕ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ನಂಬಿಕೆ ಉಳಿಯಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.