30 ಕ್ಕಿಂತ ಹೆಚ್ಚು ಹಾಸಿಗೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ರಷ್ಟು ಹಾಸಿಗೆ ಕೋವಿಡ್ ಗೆ :  ಸಚಿವ ಡಾ.ಕೆ.ಸುಧಾಕರ್

1 min read
covid

30 ಕ್ಕಿಂತ ಹೆಚ್ಚು ಹಾಸಿಗೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೇ.80 ರಷ್ಟು ಹಾಸಿಗೆ ಕೋವಿಡ್ ಗೆ :  ಸಚಿವ ಡಾ.ಕೆ.ಸುಧಾಕರ್

ಮೈಸೂರು : ಬೆಂಗಳೂರಿನಲ್ಲಿ 30 ಹಾಸಿಗೆ ಇರುವ ಖಾಸಗಿ ಆಸ್ಪತ್ರೆಗಳನ್ನು ನಾನ್ ಕೋವಿಡ್ ಗೆ ಮೀಸಲಿಡಬೇಕು. 30 ಕ್ಕಿಂತ ಹೆಚ್ಚಿರುವ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ದಿನಗಳಲ್ಲಿ ಶೇ.80 ರಷ್ಟು ಹಾಸಿಗೆಗಳನ್ನು ಕೋವಿಡ್ ಗೆ ಮೀಸಲಿಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಿದೆ. ನಗರದಲ್ಲಿ 13 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಡಯಾಲಿಸಿಸ್, ತಾಯಿ ಶಿಶು ಹಾಸಿಗೆ, ತುರ್ತು ಚಿಕಿತ್ಸೆ ಹಾಸಿಗೆ ಹೊರತುಪಡಿಸಿ, ಉಳಿದೆಲ್ಲವನ್ನೂ ಕೋವಿಡ್ ಗೆ ಮೀಸಲಿಡಲು ಸೂಚಿಸಲಾಗಿದೆ. ಇದರಿಂದಾಗಿ ಏಳೂವರೆ ಸಾವಿರ ಹಾಸಿಗೆ ಮೆಡಿಕಲ್ ಕಾಲೇಜುಗಳಿಂದ ಲಭ್ಯವಾಗಲಿದೆ. ಈ ಎಲ್ಲ ತೀರ್ಮಾನಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ ಅಂತಿಮಗೊಳಿಸಲಾಗುವುದು ಎಂದರು.

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗಿದೆ. 30 ಸಾವಿರ ಆಕ್ಸಿಜನ್ ಸಹಿತ ಹಾಸಿಗೆ ಲಭ್ಯವಿದೆ ಎಂದರು.

covid

ಕೋವಿಡ್ ಕಾರ್ಯಕ್ಕೆ ನಿಯೋಜನೆ

ವೈದ್ಯಕೀಯ ಕಾಲೇಜುಗಳಲ್ಲಿ ಪಿಜಿ, ಅಂತಿಮ ಪದವಿ ಪರೀಕ್ಷೆಯನ್ನು ಎರಡು ತಿಂಗಳು ಮುಂದೂಡಲು ಸೂಚಿಸಲಾಗಿದೆ. ವೈದ್ಯ ವಿದ್ಯಾರ್ಥಿಗಳನ್ನು ಆಯಾ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ನಿಯೋಜಿಸಲು ಸೂಚಿಸಲಾಗಿದೆ ಎಂದರು.

1 ಲಕ್ಷಕ್ಕೆ ಬೇಡಿಕೆ

ಹೆಚ್ಚುವರಿಯಾಗಿ ಒಂದು ಲಕ್ಷ ರೆಮ್ ಡಿಸ್ವಿರ್ ಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ. ಇದಕ್ಕೂ ಮುನ್ನವೇ 70 ಸಾವಿರ ವೈಲ್ ಖರೀದಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 20 ಸಾವಿರ ಸರಬರಾಜು ಆಗಿದೆ. ಮುಖ್ಯಮಂತ್ರಿಗಳು ಲಸಿಕೆ ಖರೀದಿಗೆ ನಿರ್ಣಯ ಕೈಗೊಳ್ಳಲಿದ್ದಾರೆ ಎಂದರು.

ವಿಜಯಪುರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಸಂಸ್ಥೆಯಲ್ಲಿ ಸ್ವಯಂಪ್ರೇರಿತರಾಗಿ ಹಾಸಿಗೆಗೆ 3 ಸಾವಿರ ರೂ. ದರ ನಿಗದಿಪಡಿಸಿ, ಮೂಲಸೌಕರ್ಯ ಹೆಚ್ಚಿಸಿದ್ದಾರೆ. ಈ ಸಂಸ್ಥೆ ಜಿಲ್ಲೆಯ ಸಂಜೀವಿನಿಯಾಗಿದೆ. ಎಲ್ಲ ಮೆಡಿಕಲ್ ಕಾಲೇಜುಗಳು ಇದೇ ರೀತಿ ಕೋವಿಡ್ ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಕೋರಿದರು.

ಮೈಸೂರಿನಲ್ಲಿ ಪರಿಶೀಲನೆ

ಮೈಸೂರಿಗೆ ಭೇಟಿ ನೀಡಿ ಜಿಲ್ಲಾಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಸಚಿವರು, ಮೈಸೂರಿನ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಗೆ ಮೀಸಲಿಡಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಶೇ.50 ಹಾಗೂ 37 ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆ ಮೀಸಲಿಡಲಾಗಿದೆ. ಜಯದೇವ ಸಂಸ್ಥೆಯ ತಜ್ಞರನ್ನು ಬೇರೆ ಆಸ್ಪತ್ರೆಗೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

corona cases

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd