ಉಡುಪಿ: ರಾಜ್ಯ ರಾಜಕಾರಣದಲ್ಲಿ ತೀವ್ರ ಅಸಹ್ಯ ಹುಟ್ಟಿಸಿದ್ದ ಬಿಜೆಪಿ ನಾಯಕ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ವೈಯಕ್ತಿಕ ನಿಂದನೆಯ ವಾಕ್ಸಮರಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಬ್ಬರೂ ಯುವ ನಾಯಕರಿಗೆ ಹಿರಿಯಕ್ಕನ ಸ್ಥಾನದಲ್ಲಿ ನಿಂತು ಬುದ್ಧಿಮಾತು ಹೇಳಿದ್ದು, ಈ ಕೀಳುಮಟ್ಟದ ಜಗಳವನ್ನು ಇಲ್ಲಿಗೇ ನಿಲ್ಲಿಸಿ ಯುವಜನತೆಗೆ ಮಾದರಿಯಾಗುವಂತೆ ಕರೆ ನೀಡಿದ್ದಾರೆ.
ರೋಲ್ ಮಾಡೆಲ್‌ಗಳಾಗಿ, ಕೀಳುಮಟ್ಟದ ಹೇಳಿಕೆ ನಿಲ್ಲಿಸಿ
ಪ್ರತಾಪ್ ಸಿಂಹ ಮತ್ತು ಪ್ರದೀಪ್ ಈಶ್ವರ್ ಕಿತ್ತಾಟದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, “ರಾಜಕೀಯದಲ್ಲಿ ನಾನೂ ಕೂಡ ಅನೇಕ ಅವಮಾನಗಳನ್ನು ಎದುರಿಸಿದ್ದೇನೆ. ಆದರೆ ಈ ಇಬ್ಬರೂ ನಾಯಕರು ಬಹಳ ಕೀಳು ಮಟ್ಟದಲ್ಲಿ, ಅದರಲ್ಲೂ ವಿಶೇಷವಾಗಿ ಪೋಷಕರನ್ನು ಎಳೆದು ತಂದು ಮಾತನಾಡುತ್ತಿರುವುದು ತಪ್ಪು. ಒಬ್ಬ ಅಕ್ಕನಾಗಿ ನಾನಿಬ್ಬರಿಗೂ ಸಲಹೆ ನೀಡುತ್ತೇನೆ, ದಯವಿಟ್ಟು ಇದನ್ನು ಇಲ್ಲಿಗೇ ನಿಲ್ಲಿಸಿ,” ಎಂದು ಮನವಿ ಮಾಡಿದರು.
“ಸಮಾಜವು ರಾಜಕಾರಣಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ನಮ್ಮ ನಡವಳಿಕೆ, ಭಾಷೆ ಎಲ್ಲವೂ ಯುವ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತದೆ. ನಾವು ಅವರಿಗೆ ಮಾದರಿಯಾಗಬೇಕೇ ಹೊರತು, ಈ ರೀತಿ ಅವಮಾನಕಾರಿಯಾಗಿ ವರ್ತಿಸಬಾರದು. ನಿಮ್ಮಿಬ್ಬರ ಜಗಳಕ್ಕೆ ತಂದೆ-ತಾಯಿಯನ್ನು ಎಳೆದು ತರುವುದು ಅಕ್ಷಮ್ಯ. ನೀವಿಬ್ಬರೂ ಬುದ್ಧಿವಂತರು, ಓದಿಕೊಂಡವರು. ಈ ಕಿತ್ತಾಟವನ್ನು ಇಲ್ಲಿಗೆ ಬಿಟ್ಟು, ಸಮಾಜಕ್ಕೆ ಉತ್ತಮ ಸಂದೇಶ ನೀಡಿ,” ಎಂದು ಖಡಕ್ ಆಗಿಯೇ ಕಿವಿಮಾತು ಹೇಳಿದರು.
ನವೆಂಬರ್ ಕ್ರಾಂತಿ ಹೈಕಮಾಂಡ್ ನಿರ್ಧಾರ
ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ‘ನವೆಂಬರ್ ಕ್ರಾಂತಿ’ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತೆ. ಕ್ರಾಂತಿ, ಬದಲಾವಣೆ ಇವೆಲ್ಲವೂ ಹೈಕಮಾಂಡ್‌ಗೆ ಸಂಬಂಧಿಸಿದ ವಿಚಾರಗಳು. ಯಾವುದೇ ಬದಲಾವಣೆ ಮಾಡುವ ಅಧಿಕಾರ ಎಐಸಿಸಿ ಅಧ್ಯಕ್ಷರಿಗೆ ಇದೆ. ನನ್ನನ್ನು ಒಳಗೊಂಡಂತೆ ನಾವೆಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಪಕ್ಷ ನನ್ನನ್ನು ಗುರುತಿಸಿ ಸೇವೆ ಮಾಡಲು ಅವಕಾಶ ನೀಡಿದೆ. ಒಂದು ವೇಳೆ ಬೇರೆ ಜವಾಬ್ದಾರಿ ನೀಡಿದರೂ ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ,” ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ಧರ್ಮಸ್ಥಳ ಪ್ರಕರಣ: ನ್ಯಾಯಾಲಯದ ಆದೇಶ ಪಾಲನೆ
ಸೌಜನ್ಯಾ ಪ್ರಕರಣದ ಕುರಿತು ಮಾತನಾಡಿದ ಅವರು, “ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ ಮತ್ತು ಪಾಲಿಸುತ್ತೇವೆ. ತನಿಖೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಿದೆಯೇ ಎಂದು ಚರ್ಚಿಸುವುದು ಸರಿಯಲ್ಲ. ಸರ್ಕಾರವು ತಡೆಯಾಜ್ಞೆ ತೆರವುಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಧರ್ಮಸ್ಥಳವು ಒಂದು ಪವಿತ್ರ ಕ್ಷೇತ್ರ, ಆ ಪಾವಿತ್ರ್ಯತೆ ಉಳಿಯಬೇಕು ಎಂಬ ಸಂದೇಶ ಎಲ್ಲೆಡೆ ರವಾನೆಯಾಗಬೇಕು,” ಎಂದು ಸ್ಪಷ್ಟಪಡಿಸಿದರು.
ಪ್ರತ್ಯೇಕ ಧ್ವಜಕ್ಕೆ ನನ್ನ ಬೆಂಬಲವಿಲ್ಲ
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಿ ಹೆಬ್ಬಾಳ್ಕರ್, “ನಾನು ಇದನ್ನು ಖಂಡಿತವಾಗಿ ಬೆಂಬಲಿಸುವುದಿಲ್ಲ. ಕರ್ನಾಟಕ ರಾಜ್ಯೋತ್ಸವ ಬಹಳ ಪವಿತ್ರವಾದ ದಿನ. ನಾಡಿನ ಏಕೀಕರಣಕ್ಕಾಗಿ ನಮ್ಮ ಹಿರಿಯರು, ಸಾಹಿತಿಗಳು ದೊಡ್ಡ ಹೋರಾಟ ಮಾಡಿದ್ದಾರೆ. ಅಂತಹ ಶುಭ ದಿನದಂದು ಈ ರೀತಿಯ ಬೆಳವಣಿಗೆ ಸರಿಯಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ, ಆದರೆ ಈಗಲ್ಲ,” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಇದೇ ವೇಳೆ, ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಹಾಗೂ ಸರ್ಕಾರದಲ್ಲಿ ಯಾವುದೇ ಸಂಪನ್ಮೂಲಗಳ ಕೊರತೆಯಿಲ್ಲ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಸಚಿವರು ಭರವಸೆ ನೀಡಿದರು.








