ಮೈಸೂರು: ಪಿಎಸ್ಐ ಪುತ್ರನ ವ್ಹೀಲಿಂಗ್ ಹುಚ್ಚಾಟಕ್ಕೆ ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಿಮ್ಮಾವು ಹತ್ತಿರ ನಡೆದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪಿಎಸ್ ಐ ಪುತ್ರ, ಆರೋಪಿ ಸೈಯ್ಯದ್ ಐಮಾನ್ನನ್ನು ಬಂಧಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ ಬೈಕ್ನಲ್ಲಿ ವ್ಹೀಲಿಂಗ್ ಮಾಡಿದ್ದ ಸೈಯ್ಯದ್, ಉದಯಗಿರಿ ನಿವಾಸಿಯಾಗಿದ್ದ ಗುರುಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಯುವಕನನ್ನು ಸ್ಥಳೀಯರು ವಿಚಾರಣೆ ನಡೆಸಿದಾ ತಾನು ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಯಾಸ್ಮಿನ್ ತಾಜ್ ಅವರ ಪುತ್ರ ಎಂದು ಹೇಳಿದ್ದಾನೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಸೈಯ್ಯದ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಹಿಂದೆ ಕೂಡ ಸೈಯ್ಯದ್ ಐಮಾನ್ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದನು. ಆಗ ಪೊಲೀಸರು ದಂಡ ವಿಧಿಸಿ ಕಳುಹಿಸಿದ್ದರು. ಈತನ ವಿರುದ್ಧ ಕಳ್ಳತನ ಆರೋಪವೂ ಇದೆ ಎನ್ನಲಾಗಿದೆ.