ವೆಂಟಿಲೇಟರ್ಗಳ ಬಳಕೆಗೆ ತರಬೇತಿ ನೀಡುವ ಕಾರ್ಯಕ್ರಮ ಹೆಚ್ಚಿಸಿ : ಜಗದೀಶ್ ಶೆಟ್ಟರ್
ಬೆಂಗಳೂರು ಮೇ 25: ಕೋವಿಡ್ ರೋಗಿಗಳಲ್ಲಿ ವೆಂಟಿಲೇಟರ್ ಗಳ ಬಳಕೆಯ ಬಗ್ಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಲ್ಲಿ ಪ್ರಾಯೋಗಿಕ ಕ್ರಮಗಳ ಬಗ್ಗೆ ತರಬೇತಿಯನ್ನು ನೀಡುವ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹೆಚ್ಚಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಇಂದು ಕರ್ನಾಟಕ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಹುಬ್ಬಳ್ಳೀ, ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಘ ಮತ್ತು ಇಂಡಿಯನ್ ಸೊಸೈಟಿ ಆಫ್ ಅನಸ್ತೇಸಿಯಾಲಜಿಸ್ಟ್ ಹುಬ್ಬಳ್ಳಿ ಜಂಟಿಯಾಗಿ ಕೋವಿಡ್ ರೋಗಿಗಳಲ್ಲಿ ವೆಂಟಿಲೇಟರ್ ಬಳಕೆಯ ಬಗ್ಗೆ ಪ್ರಾಯೋಗಿಕ ಕ್ರಮಗಳ ಬಗ್ಗೆ ಆಯೋಜಿಸಿದ್ದ ವೆಬಿನಾರ್ ನಲ್ಲಿ ಭಾಗವಹಿಸಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪಾಲ್ಗೊಂಡು ಮಾತನಾಡಿದರು.
ದೇಶದ ಗ್ರಾಮೀಣ ಭಾಗದಲ್ಲೂ ಅತ್ಯಾಧುನಿಕ ಚಿಕಿತ್ಸೆಗೆ ಅನುಕೂಲವಾಗಲು ಪ್ರಧಾನಮಂತ್ರಿಗಳ ಅನುದಾನದ ಅಡಿಯಲ್ಲಿ ಪ್ರತಿ ತಾಲ್ಲೂಕಿಗೂ 6 ವೆಂಟಿಲೇಟರ್ ಗಳನ್ನು ನೀಡಲಾಗಿತ್ತು. ಆದರೆ, ಆವುಗಳನ್ನು ಬಳಸುವ ತಜ್ಞ ವೈದ್ಯರು ಇಲ್ಲದೆ ಬಹುತೇಕ ವೆಂಟಿಲೇಟರ್ ಗಳು ಉಪಯೋಗ ಆಗುತ್ತಿಲ್ಲ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ತುರ್ತು ಸಂಧರ್ಭದಲ್ಲಿ ವೆಂಟಿಲೇಟರ್ ಗಳನ್ನು ಉಪಯೋಗಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದರು.
ಕೋವಿಡ್ 2 ನೇ ಅಲೆಯಲ್ಲಿ ಆಮ್ಲಜನಕ ಹಾಗೂ ವೆಂಟಿಲೇಟರ್ ಬೆಡ್ ಗಳ ಬೇಡಿಕೆ ಹೆಚ್ಚಾಗಿದೆ. ಆದರೆ, ಸೂಕ್ತ ತರಬೇತಿ ಇಲ್ಲದೆ ವೆಂಟಿಲೇಟರ್ ಗಳ ಉಪಯೋಗದಿಂದ ಆಗುವ ಹಾನಿಯೇ ಹೆಚ್ಚು. ಈ ನಿಟ್ಟಿನಲ್ಲಿ ತಜ್ಞ ವೈದ್ಯರು ಇಲ್ಲದ ಕಡೆಯಲ್ಲಿ ವೆಂಟಿಲೇಟರ್ಗಳನ್ನು ಪರಿಣಾಮಕಾರಿಯಾಗಿ ಬಳಸುವುದರ ಬಗ್ಗೆ ವೈದ್ಯಕೀಯ ಸಿಬ್ಬಂದಿಗಳಲ್ಲಿ ತರಬೇತಿ ನೀಡಬೇಕು ಎಂದು ಹೇಳಿದರು.
ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಳು ಆಮ್ಲಜನಕವನ್ನು ಮಿತವಾಗಿ ಬಳಸುವಂತೆ ಹಾಗೂ ವೆಂಟಿಲೇಟರ್ಗಳನ್ನು ಬಳಸಲು ಸೂಕ್ತ ತರಬೇತಿಯನ್ನು ಪಡೆದುಕೊಳ್ಳುವಂತೆ ಈ ವೆಬಿನಾರ್ ಮೂಲಕ ವೈದ್ಯಕೀಯ ಸಿಬ್ಬಂದಿಗಳಲ್ಲಿ ತಿಳುವಳಿಕೆ ಮೂಡಿಸುವಂತೆ ಹೇಳಿದರು.
ವೆಬಿನಾರ್ ನಲ್ಲಿ ಕೋವಿಡ್ ತಜ್ಞ ಸಮಿತಿಯ ಸದಸ್ಯರು ಹಾಗೂ ವೆಬಿನಾರ್ ನ ಅಧ್ಯಕ್ಷರಾದ ಡಾ. ಜಿ.ಬಿ ಸುತ್ತೂರ್, ರಾಜೀವ್ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ ಸಚ್ಚಿದಾನಂದ, ಡಾ ರಾಜೇಶ್ ಫಾಟ್ಕೆ, ಡಾ. ಬಸವಾರಾಜ್ ಕೊಲ್ಲಾಪುರ್, ಡಾ ಇಮ್ರಾನ್ ಶೋಹ್ಲಾಪುರ್ ಪಾಲ್ಗೊಂಡಿದ್ದರು.