ಖ್ಯಾತ ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಜಯ್ ಆಂಟೋನಿ (Vijay Antony) ಅವರ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪುತ್ರಿ ಮೀರಾ (Meera) ಅವರು ಇಂದು ಬೆಳಿಗ್ಗೆ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಪಿಯುಸಿ ಓದುತ್ತಿದ್ದ ಮೀರಾ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು. ಆದರೆ, ಅವರು ಇಂದು ಬೆಳಿಗ್ಗೆ ತಮ್ಮ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಬಾಗಿಲು ತುಂಬಾ ಹೊತ್ತಾದರೂ ತೆರೆಯದೇ ಇರುವ ಕಾರಣಕ್ಕಾಗಿ, ಬಾಗಿಲು ತೆರೆದು ನೋಡಿದಾಗ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೀರಾ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಗಿದೆ. ಆದರೆ, ಅಷ್ಟರಲ್ಲಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ ಉತ್ತಮ ಅಂಕಗಳನ್ನೇ ಪಡೆಯುತ್ತಿದ್ದ ಮೀರಾ, ಮಾನಸಿಕ ಖಿನ್ನತೆಗೆ ಜಾರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.