ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರೊಂದಿಗೆ ಸಹಾಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರಣ್ ರಾಜ್(26) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಗುರುವಾರ (ಜೂ.8 ರಂದು) ರಾತ್ರಿ 11:30 ರ ಹೊತ್ತಿಗೆ ಕೆ.ಕೆ. ನಗರ್ ದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಸ್ವರೂಪದಲ್ಲಿ ಗಾಯಗೊಂಡ ಶರಣ್ ರಾಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಾಲಿವುಡ್ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಅಪಘಾತ ಎಸಗಿದೆ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಪಳನಿಯಪ್ಪನ್ ಅವರನ್ನು ಬಂಧಿಸಲಾಗಿದೆ.
ಸಿನಿಮಾ ರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ನಿರ್ದೇಶಕ ವೆಟ್ರಿಮಾರನ್ ಅವರ ಸಿನಿಮಾ ʼ ವಡಾ ಚೆನ್ನೈʼ ಹಾಗೂ ʼಅಸುರನ್ʼ ಸಿನಿಮಾದಲ್ಲಿ ಶರಣ್ ರಾಜ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.