ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ (Accident) ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬೇಲೂರು (Beluru) ತಾಲೂಕಿನ ಕೊರಟಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಚಿಕ್ಕಮಗಳೂರು (Chikkamagaluru) ಮೂಲದ ದಯಾನಂದ (46) ಸಾವನ್ನಪ್ಪಿದ್ದು, ಅವರ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಶ್ಮಿತಾ (16) ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ದಯಾನಂದ್ ಅವರು ಬೇಲೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ಅಲ್ಲೇ ವಾಸವಿದ್ದರು. ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ಅವರು ಇಂದು (ಸೋಮವಾರ) ಮಗಳೊಂದಿಗೆ ಚಿಕ್ಕಮಗಳೂರಿನಿಂದ ಬೇಲೂರಿಗೆ ಹೋಗುತ್ತಿದ್ದರು. ಈ ವೇಳೆ ಕಾರು ಪಲ್ಟಿಯಾಗಿ ಈ ಘಟನೆ ನಡೆದಿದೆ. ಕಾರು ಪಲ್ಟಿಯಾಗಿ ಅಡಿಕೆ ತೋಟದಲ್ಲಿ ಬಿದ್ದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.







