ಬೆಂಗಳೂರು: ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಇದಕ್ಕೆ ಯಾರು ಹೊಣೆʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್‌ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಆರೋಪಿಸಿದ್ದಾರೆ.
ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್‌ಗೆ ಕುಸಿದಿದೆ. ʼಹಣಕಾಸು ವರ್ಷ 2020-21ರಲ್ಲಿ ₹ 4.42 ಲಕ್ಷ ಕೋಟಿ, 2021-22ರಲ್ಲಿ ₹ 4.37 ಲಕ್ಷ ಕೋಟಿ, 2022-23ರಲ್ಲಿ ₹3.67 ಲಕ್ಷ ಕೋಟಿ ಮತ್ತು 2023-24ರಲ್ಲಿ ₹ 3.47 ಲಕ್ಷ ಕೋಟಿಗೆ ಇಳಿದಿದೆ. ಕಳೆದ 4 ವರ್ಷಗಳಲ್ಲಿ ಎಫ್‌ಡಿಐ ನಿರಂತರವಾಗಿ ಹೀಗೆ ಕುಸಿಯುತ್ತಲೇ ಸಾಗಿರುವುದರತ್ತ ಸಚಿವರು ಬೆಳಕು ಚೆಲ್ಲಿದ್ದಾರೆ ಎಂದು ಹೇಳಇದ್ದಾರೆ.
ʼಎಫ್‌ಡಿಐ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿ ಇದ್ದ ರಾಜ್ಯವು ಈಗ 3ನೇ ಸ್ಥಾನಕ್ಕೆ ಇಳಿಯಲು ಕೇಂದ್ರ ಸರ್ಕಾರದ ಧೋರಣೆ ಹಾಗೂ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಮುಖ್ಯ ಕಾರಣಗಳಾಗಿವೆ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಒಲವು ತೋರಿಸಿದ್ದ ವಿದೇಶಿ ಹೂಡಿಕೆದಾರರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಒತ್ತಾಸೆಯ ಮೇರೆಗೆ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳತ್ತ ಮುಖ ಮಾಡಿರುವುದೂ ಇದಕ್ಕೆ ಕಾರಣʼ ಎಂದು ವಿವರಿಸಿದ್ದಾರೆ.